ADVERTISEMENT

50 ವರ್ಷಗಳ ಹಿಂದೆ | ಶನಿವಾರ 4–4–1970

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 19:45 IST
Last Updated 3 ಏಪ್ರಿಲ್ 2020, 19:45 IST

ಭದ್ರಾ ನಾಲೆ ಒಡೆದ ಬಗ್ಗೆ ವಿಚಾರಣೆ
ಬೆಂಗಳೂರು, ಏ. 3–
ಈ ವರ್ಷ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಭದ್ರಾ ನಾಲೆಯು ಒಡೆದಿರುವ ಬಗ್ಗೆ ಕಾರಣಗಳನ್ನು ಕಂಡುಹಿಡಿಯಲು ವಿಚಾರಣೆ ನಡೆಸಲಾಗುವುದೆಂದು ದೊಡ್ಡ ನೀರಾವರಿ ಮತ್ತು ವಿದ್ಯುಚ್ಛಕ್ತಿ ಉಪಸಚಿವ ಶ್ರೀ ಡಿ. ಪರಮೇಶ್ವರಪ್ಪ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಈ ಸಂಬಂಧದಲ್ಲಿ ವಿಚಾರಣಾಧಿಕಾರಿಗಳನ್ನು ನೇಮಿಸಲಾಗುವುದೆಂದು ಹೇಳಿದಾಗ, ವಿರೋಧ ಪಕ್ಷದ ಅನೇಕ ಸದಸ್ಯರು ವಿಚಾರಣಾಧಿಕಾರಿಯ ಹೆಸರನ್ನು ತಿಳಿಯಬಯಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಘಟ್ಟದಲ್ಲಿ ಹೆಸರನ್ನು ಬಹಿರಂಗಪಡಿಸುವುದಕ್ಕಾಗುವುದಿಲ್ಲವೆಂದು ಉಪಸಚಿವರು ಹೇಳಿದರು.

ಕಾರ್ಪೊರೇಷನ್‌ ಆಕ್ರಮಿಸಿದ ನಂದಗೋಕುಲ
ಬೆಂಗಳೂರು, ಏ. 3–
ಸತತವಾದ ಕೂಗು, ನಗರ ನೈರ್ಮಲ್ಯದ ಹೊಣೆ ಹೊತ್ತ ಕಾರ್ಪೊರೇಷನ್‌ ಕಚೇರಿ ಆವರಣದಲ್ಲೇ ನಿರ್ಭೀತವಾಗಿ ಸಗಣಿ ಗಂಜಲ ಧಾರೆ. ನಗರವಾಸಕ್ಕೆ ತಲೆಗಂದಾಯ ಕೊಡಬೇಕೆಂಬ ಧೋರಣೆಯನ್ನು ಪ್ರತಿಭಟಿಸುವ ಸುಮಾರು 300ಕ್ಕೂ ಹೆಚ್ಚು ಸಂಖ್ಯೆಯ ದನ, ಎಮ್ಮೆ, ಕತ್ತೆ, ನಾಯಿಗಳೇ ಪ್ರದರ್ಶನಕಾರರು.

ADVERTISEMENT

ಹಗ್ಗ ಹಿಡಿದ ಪಾಲಕರ ಘೋಷಣೆಗಳನ್ನು ಮೆಟ್ಟಿನಿಂತಿತು ಅಂಬಾ ನಿನಾದ. ಒಂದೆರಡು, ಮೂಗುದಾರ ಹರಿದುಕೊಂಡು ಸ್ವೇಚ್ಛೆಯ ಓಡಾಟ ಬಯಸಿದವು. ಸತತ ಗದ್ದಲದಿಂದ ಕಾರ್ಪೊರೇಷನ್‌ ನೌಕರರು ಕೆಲಸ ಮಾಡಲಾಗದೆ ಹೊರ ಬಂದರು. ಪ್ರಾಣಿಗಳು ಮೂಕವಲ್ಲ ಎಂದು ತೋರುವ ಈ ಪ್ರತಿಭಟನೆ ಲೈಸೆನ್ಸ್‌ ಪಡೆದು ಜೀವಿಸಬೇಕೆಂಬ ನಿಯಮದ ವಿರುದ್ಧ.

ಕಾರ್ಪೊರೇಷನ್‌ ಕಚೇರಿ ಪ್ರವೇಶಿಸುವ ಮೆಟ್ಟಿಲು ಹತ್ತಿನಿಂತ ದೊಡ್ಡದೊಂದು ಗೂಳಿ, ಪೊರ್ಟಿಕೋ ಎಡಬದಿಗೆ ಗಾರ್ದಭ ಕಂಡುಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.