ADVERTISEMENT

ಶುಕ್ರವಾರ, 18–4–1969

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 20:00 IST
Last Updated 17 ಏಪ್ರಿಲ್ 2019, 20:00 IST

‘ದಣಿ’ಗಳ ಕಡ್ಡಾಯ ನಿವೃತ್ತಿಗೆ ಕಾಂಗ್ರೆಸ್ ಸಮಾಜವಾದಿಗಳ ಕರೆ
ನವದೆಹಲಿ, ಏ. 17– ‘ಕಾಂಗ್ರೆಸಿನ ಎಲ್ಲ ಮಟ್ಟಗಳಲ್ಲಿರುವ ‘ದಣಿಗಳು’ ಕಡ್ಡಾಯವಾಗಿ ನಿವೃತ್ತರಾಗಬೇಕು. ಹಾಗೆ ಮಾಡಿದರೆ ಮಾತ್ರ ಮಹಾಸಂಸ್ಥೆ ಎನಿಸಿದ ಕಾಂಗ್ರೆಸಿನ ಗೌರವ ಖ್ಯಾತಿ ಶೋಭಿಸೀತು’ ಎಂದು ಸಮಾಜವಾದಿ ಕ್ರಮಕ್ಕಾಗಿ ಇರುವ ಕಾಂಗ್ರೆಸ್ ವೇದಿಕೆ ಇಂದು ಒತ್ತಾಯಪಡಿಸಿದೆ.

ಪಕ್ಷದ ಅಂಗೀಕೃತ ನೀತಿಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲಿ ಕಾರ್ಯಗತಗೊಳಿಸಲು ಇದುವರೆಗೂ ಕಾಂಗ್ರೆಸ್ ನಾಯಕರು ಸಮರ್ಥರಾಗಲಿಲ್ಲ ಎಂದೂ ಅದು ಇಂದು ಹೊರಡಿಸಿದ ‘ಘೋಷಣೆ’ಯಲ್ಲಿ ಆಪಾದಿಸಿದೆ.

ಕಾಂಗ್ರೆಸ್ ನಾಯಕತ್ವದ ಮೇಲೆ ತೀವ್ರವಾದ ಅಪಾದನೆ, ‘ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಪಕ್ಷವನ್ನು ಸಂಪೂರ್ಣವಾಗಿ ಪುನರ್ ವ್ಯವಸ್ಥೆಗೊಳಿಸಬೇಕೆಂಬ ಒತ್ತಾಯ, ದಶಾಂಶ, ಆರ್ಥಿಕ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ತೀವ್ರವಾಗಿ ಪ್ರಚಾರ ಮಾಡುವುದಕ್ಕೆ ಯುವಕರಿಗೆ ಆಮಂತ್ರಣ–
ಇವು ಫರೀದಾಬಾದ್ ವಾರ್ಷಿಕಾಧಿವೇಶನಕ್ಕೆ ಹಾಜರಾಗಲಿರುವ ಕಾಂಗ್ರೆಸಿಗರಿಗೆ ಸಮಾಜವಾದಿ ಕ್ರಮಕ್ಕಾಗಿ ಇರುವ ಕಾಂಗ್ರೆಸ್ ವೇದಿಕೆ ನೀಡಿರುವ ‘ಘೋಷಣೆ’ಯಲ್ಲಿರುವ
ವಿಷಯಗಳು.

ADVERTISEMENT

ಹಸಿದ ಮಹಾರಾಷ್ಟ್ರಕ್ಕೆ ಇಂದಿನಿಂದ ಮೈಸೂರು ವಿದ್ಯುತ್
ಬೆಂಗಳೂರು, ಏ. 17– ವಿದ್ಯುಚ್ಛಕ್ತಿಯ ಅಭಾವದಿಂದ ‘ಹಸಿದಿರುವ’ ಮಹಾರಾಷ್ಟ್ರದ ಕೈಗಾರಿಕೆಗಳಿಗೆ ಸಾಕಷ್ಟು ಪರಿಹಾರ ಒದಗಿಸಲಿರುವ ಮೈಸೂರಿನ ವಿದ್ಯುತ್ತು, ನಾಳೆಯಿಂದ ಬೆಳಗಾವಿ–ಕೊಲ್ಲಾಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹರಿಯಲಿದೆ. ಈ ಉದ್ದೇಶಕ್ಕಾಗಿ ನಿರ್ಮಾಣವಾಗಿರುವ ಬೆಳಗಾವಿ–ಕೊಲ್ಲಾಪುರಗಳ ನಡುವಿನ 64 ಮೈಲಿಗಳುದ್ದದ ಸಂಪರ್ಕ ವ್ಯವಸ್ಥೆಗೆ ಸುಮಾರು 120 ಲಕ್ಷ ರೂಪಾಯಿಗಳು ಖರ್ಚಾಗಿವೆ.

ಭಾರತ–ಪಾಕ್ ಸೌಹಾರ್ದತೆ: ಯಾಹ್ಯಾಖಾನ್‌ಗೆ ರಾಷ್ಟ್ರಪತಿ ಸಂದೇಶ
ನವದೆಹಲಿ, ಏ. 17– ಶಾಂತಿಯುತ ಮಾತುಕತೆಗಳನ್ನು ನಡೆಸುವುದರ ಮೂಲಕ ಎರಡು ರಾಷ್ಟ್ರಗಳ ನಡುವಣ ಸಂಬಂಧ ಮಾಮೂಲು ಸ್ಥಿತಿಗೆ ಬರಲು ಪಾಕಿಸ್ತಾನ ನೆರವಾಗುವುದೆಂಬ ನಂಬಿಕೆಯನ್ನು ಭಾರತವು ಇಂದು ವ್ಯಕ್ತಪಡಿಸಿತು.

ರಾಷ್ಟ್ರಪತಿ ಜಾಕೀರ್ ಹುಸೇನ್ ಅವರು ಪಾಕಿಸ್ತಾನ್ ಅಧ್ಯಕ್ಷ ಯಾಹ್ಯಾಖಾನ್‌ ಅವರಿಗೆ ಕಳುಹಿಸಿರುವ ಸಂದೇಶವೊಂದರಲ್ಲಿ ಈ ವಿಷಯ ತಿಳಿಸಲಾಗಿದೆ.

ಉಭಯ ರಾಷ್ಟ್ರಗಳ ನಡುವಣ ಸೌಹಾರ್ದ ಮತ್ತು ಸ್ನೇಹ ವೃದ್ಧಿಗೆ ಭಾರತವು ಶ್ರಮಿಸುವುದಾಗಿ ಡಾ. ಜಾಕೀರ್ ಹುಸೇನ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.