ADVERTISEMENT

ಬುಧವಾರ, 23–4–1969

ಬುಧವಾರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:57 IST
Last Updated 22 ಏಪ್ರಿಲ್ 2019, 19:57 IST

ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ವಿಮಾನದ ಅಪಘಾತ; 44 ಸಾವು

ಕಲ್ಕತ್ತ, ಏ. 22– ಅಸ್ಸಾಂನ ಸಿಲ್ಚಾರ್‌ನಿಂದ ತ್ರಿಪುರದಲ್ಲಿರುವ ಅಗರ್ತಲ ಮೂಲಕ ಕಲ್ಕತ್ತೆಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್‌ ಸಂಸ್ಥೆಯ ವಿಮಾನವೊಂದು ಸೋಮವಾರ ರಾತ್ರಿ ಪೂರ್ವ ಪಾಕಿಸ್ತಾನದ ಖುಲ್ನಾ ಬಳಿ ಅಪಘಾತಕ್ಕೀಡಾಗಿ ಒಂದು ಶಿಶುವೂ ಸೇರಿ ಅದರಲ್ಲಿದ್ದ 44 ಮಂದಿ ಸಾವಿಗೀಡಾದರು.

ಖುಲ್ನಾಕ್ಕೆ ಹನ್ನೊಂದು ಕಿಲೋಮೀಟರ್ ದೂರದಲ್ಲಿರುವ ಬೀಲ್ ಪಗ್ಲ ಎಂಬ ಗ್ರಾಮದಲ್ಲಿ ಫಾಕರ್ ಫ್ರೆಂಡ್‌ಷಿಪ್ ವಿಮಾನವೊಂದು ಜೌಗುಪ್ರದೇಶಕ್ಕೆ ಬಿದ್ದಿದೆಯೆಂದು ಢಾಕಾದ ರಾಯಿಟರ್ ವಾರ್ತಾಸಂಸ್ಥೆ ವರದಿ ಹೇಳಿದ್ದಿತು. ವಿಮಾನದೊಳಕ್ಕೆ ಸಿಕ್ಕಿಬಿದ್ದಿರುವ ದೇಹಗಳನ್ನು ಪೊಲೀಸರು ಹೊರತೆಗೆಯುತ್ತಿದ್ದಾರೆ. ಅವಶೇಷಗಳನ್ನು ಪೊಲೀಸರು ಕಾಯುತ್ತಿದ್ದಾರೆ ಎಂದೂ ಈ ವರದಿ ತಿಳಿಸಿದೆ.

ADVERTISEMENT

ಗಾಂಧೀ‌ಜಿ ಕುಟುಂಬದ ಪ್ರಥಮ ವಿದೇಶಿ ಸೊಸೆ

ಮುಂಬಯಿ, ಏ. 22– ಮಹಾತ್ಮ ಗಾಂಧಿಯವರ ಮರಿಮಗ ಡಾ. ಶಾಂತಿಕುಮಾರ್ ಗಾಂಧಿಯವರು ಓಹಿಯೋದಲ್ಲಿ ಅಮೆರಿಕದ ನರ್ಸ್ ಸುಸಾನಲಾಪೋರ್ಸ್ ಎಂಬುವರನ್ನು ಮೇ ಮೂರರಂದು ‘ಹಿಂದೂ ಪದ್ಧತಿಯ ರೀತ್ಯ ಮದುವೆಯಾಗುವರು’. ಇದು ಪ್ರೇಮ ವಿವಾಹ.

ಮಹಾತ್ಮ ಗಾಂಧಿ ಮನೆತನಕ್ಕೆ ಸೇರಿದವರು ವಿದೇಶಿಯೊಬ್ಬರನ್ನು ಮದುವೆಯಾಗುತ್ತಿರುವುದು ಇದೇ ಪ್ರಥಮ.

ಡಾ. ಶಾಂತಿಕುಮಾರ ಗಾಂಧಿಯವರು ಮಹಾತ್ಮ ಗಾಂಧಿಯವರ ಹಿರಿಯ ಮಗ ಹರಿಲಾಲ್‌ ಗಾಂಧಿ ಅವರ ಮೊಮ್ಮಗ.

‘ಫ್ಯಾಂಟಮ್‌’ನ ಪ್ರತ್ಯಕ್ಷ

ಡೆರ್ವಿಕ್, ನೋವಾಸ್ಕಾಟಂಡಾ, ಏ. 22– ಆನ್‌ಪೊಲಸ್ ಕಣಿವೆಯಲ್ಲಿರುವ ಈ ಪಟ್ಟಣದ ಬಳಿ ‘ಅತಿಮಾನುಷ ವ್ಯಕ್ತಿ’ಯೊಬ್ಬ ಕಾಣಿಸಿಕೊಂಡಿದ್ದಾನೆ. ಈ ‘ಫ್ಯಾಂಟಮ್‌’ನ ಎತ್ತರ 3ರಿಂದ 5 ಮೀಟರ್‌ಗಳಷ್ಟೆಂದು ಅಂದಾಜು ಮಾಡಲಾಗಿದೆ.

ಈ ಪಟ್ಟಣದ ಜನರು ತಮ್ಮ ಮನೆಗಳ ಕಿಟಕಿ ತೆರೆಗಳನ್ನು ಸರಿಸಿ, ರಾತ್ರಿ ಉರಿಯುತ್ತಿದ್ದ ದೀಪದ ಬೆಳಕಿನಲ್ಲಿ ಅವನನ್ನು ಕಂಡುದಾಗಿ ಹೇಳುತ್ತಾರೆ.

ಇಲ್ಲಿಂದ ಪಶ್ಚಿಮಕ್ಕೆ 8 ಕಿಲೋಮೀಟರ್ ಪ್ರದೇಶದಲ್ಲಿ ಕಾಣಿಸಿಕೊಂಡ ಈ ‘ಫ್ಯಾಂಟಮ್’ ಎತ್ತರವಾಗಿಯೂ ತುಂಬಾ ಕಪ್ಪಗೂ ಇದ್ದನಂತೆ.

ಗುರುವಾರ ರಾತ್ರಿ ಈ ‘ಅತಿಮಾನುಷ ವ್ಯಕ್ತಿ’ಯನ್ನು ಕಂಡ ಡೋರ್ನ್ ಕೆಡ್ಲಿ, ‘ಬೃಹತ್ತಾದ ಕಪ್ಪನೆಯ ಆಕೃತಿಯೊಂದನ್ನು ನಾನು ಮತ್ತು ನನ್ನ ಹೆಂಡತಿ ನೋಡಿದೆವು. ಅದು ಧಾನ್ಯಗಾರವೊಂದರ ಹಿಂದೆ ಅದೃಶ್ಯವಾಯಿತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.