ADVERTISEMENT

50 ವರ್ಷದ ಹಿಂದೆ: ಅಕ್ಕಿ ಕೊಡಿ, ಇಲ್ಲವೇ ದಂಗೆ

ಶನಿವಾರ, 24 ಮೇ 1975

ಪ್ರಜಾವಾಣಿ ವಿಶೇಷ
Published 23 ಮೇ 2025, 18:47 IST
Last Updated 23 ಮೇ 2025, 18:47 IST
   

ಅಕ್ಕಿ ಕೊಡಿ, ಇಲ್ಲವೇ ದಂಗೆ

ವೆಲ್ಲೂರು, ಮೇ 23– ಅಕ್ಕಿಗಾಗಿ ರಾಜ್ಯವು ಸಲ್ಲಿಸಿರುವ ಬೇಡಿಕೆಯನ್ನು ಪೂರೈಸಲು ಕೇಂದ್ರ ಸರ್ಕಾರ ವಿಫಲವಾದರೆ ಕೇಂದ್ರದ ವಿರುದ್ಧ, ಹಿಂದೆಂದೂ ಕಾಣದಂಥ ಅಭಾವಪೀಡಿತ ಪರಿಸ್ಥಿತಿಗೊಳಗಾಗಿರುವ ತಮಿಳುನಾಡಿನ ಜನತೆ ‘ಬಂಡಾಯ’ ಏಳುವರೆಂದು ಮುಖ್ಯಮಂತ್ರಿ ಕರುಣಾನಿಧಿಯವರು ಇಲ್ಲಿ ಇಂದು ಹೇಳಿದರು.

ಅಭಾವ ಪರಿಹಾರ ಕಾಮಗಾರಿ ಸಂಬಂಧದಲ್ಲಿ ತಮಿಳುನಾಡಿನ ಬಗೆಗೆ ಕೇಂದ್ರ ‘ತಾರತಮ್ಯದ ಧೋರಣೆ’ ಅನುಸರಿಸುತ್ತಿದೆ ಎಂದು ಅವರು ಆಪಾದಿಸಿದರು.

ADVERTISEMENT

***

‘ಕುರಿ’ ದಕ್ಷಿಣೆ

ಸುಂದರ್‌ನಗರ್‌ (ಹಿಮಾಚಲ ಪ್ರದೇಶ), ಮೇ 23– ಮದುವೆ ಗಂಡು ವರದಕ್ಷಿಣೆಯಾಗಿ ಬಯಸಿದ್ದು ಸ್ಕೂಟರ್‌. ಆದರೆ ದೊರೆತಿದ್ದು ಒಂದು ಕುರಿ ಜತೆಗೆ ನಿಶ್ಚಯಿಸಿದ್ದ ಹೆಣ್ಣೂ ಕೈತಪ್ಪಿಹೋಗಿ ಬಡ ಹುಡುಗಿಯೊಬ್ಬಳಿಗೆ ತಾಳಿ ಕಟ್ಟಬೇಕಾಯಿತು.

ಇಲ್ಲಿಗೆ 30 ಕಿ.ಮೀ. ದೂರದ ಗ್ರಾಮದಲ್ಲಿ ಈ ಘಟನೆ ನಡೆದದ್ದು. ಹಸೆಮಣೆ ಏರುವ ಮುನ್ನ ಬೀಗರನ್ನು ಮದುಮಗ ಸ್ಕೂಟರ್‌ ಕೇಳಿದ್ದ. ಇದರಿಂದ ಮದುಮಗಳಿಗೆ ಸಿಟ್ಟು, ಬೇಸರ. ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿ ವಾಪಸು ಹೋಗಲು ಗಂಡಿನವರಿಗೆ ಸೂಚಿಸಿದಳು.

ದಿಗ್ಭ್ರಮೆಗೊಂಡ ಗಂಡಿನ ಕಡೆಯವರು ಕ್ಷಮೆ ಕೇಳಿದರು. ಆದರೆ ಹೆಣ್ಣಿನ ಮನಸ್ಸು ಕರಗಲಿಲ್ಲ. ಈ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಗಂಡಿನವರ ನೆರವಿಗೆ ಬಂದರು. ಬೇರೆ ಬಡ ಹುಡುಗಿಯೊಬ್ಬಳನ್ನು ತಂದು ಹೇಗೋ ಮದುವೆ ಮುಗಿಸಿದರು. ಜತೆಗೆ ವರದಕ್ಷಿಣೆಯಾಗಿ ಒಂದು ಕುರಿಯನ್ನೂ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.