50 ವರ್ಷಗಳ ಹಿಂದೆ
ಗೃಹ ಶಾಖೆಗೆ ‘ಗುಪ್ತ ಸೂಚನೆ’
ಬೆಂಗಳೂರು, ಮೇ 15– ‘ಪೊಲೀಸ್ ಠಾಣೆಯಲ್ಲಿನ ಹೀನ ಕೃತ್ಯಗಳಿಗೆ ಉನ್ನತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು’.
ರಾಜ್ಯದ ಗೃಹ ಶಾಖೆಗೆ ಈಚೆಗೆ ಮುಖ್ಯಮಂತ್ರಿ ಅರಸು ಕಳಿಸಿರುವ ‘ಗುಪ್ತ ಸೂಚನೆ’ ಇದು.
ಮಾರ್ಗರೆಟ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪೇದೆಗಳಿಗೆ ವಿಧಿಸಿದ ಶಿಕ್ಷೆಯನ್ನು ಪ್ರಸ್ತಾಪಿಸಿ ‘ಇದು ತೀರಾ ಸಾಮಾನ್ಯ ಶಿಕ್ಷೆ’ ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿಯವರು, ‘ಸಂಬಂಧಿಸಿದ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ನನ್ನು ತತ್‌ಕ್ಷಣ ಸಸ್ಪೆಂಡ್ ಮಾಡಬೇಕಾಗಿತ್ತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಉನ್ನತ ಅಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳ ಮೇಲೆ ಸಾಕಷ್ಟು ನಿಗಾ ಇಟ್ಟಂತೆ ಕಂಡುಬರುವುದಿಲ್ಲ. ಉನ್ನತ ಅಧಿಕಾರಿಗಳು ತಮ್ಮ ‘ದುಷ್ಕೃತ್ಯ’ಗಳಿಗೆ ಪೊಲೀಸ್ ಪೇದೆಗಳನ್ನು ಉಪಯೋಗಿಸುತ್ತಾರೆ’ ಎಂದೂ ಅವರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಯಿಗೆ ಮಾರ್ಗರೆಟ್ ಬರೆದ ಪತ್ರ
ಬೆಂಗಳೂರು, ಮೇ 15– ‘ನಾನು ಸಾಯಲು ಸಿದ್ಧ. ಆದರೆ ಪೊಲೀಸರು ನೆಮ್ಮದಿಯಿಂದ ಇರಲಾರರು ಎಂದು ಭಾವಿಸಿರುವೆ’.
–ಹೀಗೆ, 14 ವರ್ಷ ವಯಸ್ಸಿನ ಮುಗ್ಧ ಬಾಲಕಿ ಮಾರ್ಗರೆಟ್, ಅಲಸೂರಿನ ಕೆರೆಗೆ ಧುಮುಕಿ ಸಾಯುವುದಕ್ಕಿಂತ ಮುಂಚೆ ತನ್ನ ತಾಯಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾಳೆ.
ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಪತ್ರದಲ್ಲಿ ವಿವರಿಸಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.