ADVERTISEMENT

50 ವರ್ಷಗಳ ಹಿಂದೆ: ಬುಧವಾರ, 23–12–1970

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 20:14 IST
Last Updated 22 ಡಿಸೆಂಬರ್ 2020, 20:14 IST
   

ಉದ್ಯೋಗ ನೀಡಬಲ್ಲ ಶಿಕ್ಷಣ ವ್ಯವಸ್ಥೆಗೆ ರಾಷ್ಟ್ರಪತಿ ಕರೆ
ಬೆಂಗಳೂರು, ಡಿ. 22–
ನಮ್ಮ ದೇಶದಂಥ ಬೃಹತ್‌ ದೇಶದಲ್ಲಿ ಶಿಕ್ಷಣವು ಅರ್ಥಗರ್ಭಿತವಾಗಿರಬೇಕಾದರೆ ಅದು ಪ್ರಧಾನವಾಗಿ ಉದ್ಯೋಗ ನೀಡಬಲ್ಲ ಶಿಕ್ಷಣವಾಗಿರಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಇಲ್ಲಿ ಪುನಃ ಪ್ರತಿಪಾದಿಸಿದರು.

ಜ್ಯೋತಿ ಬೆಳಗಿಸಿ ನಗರದ ನ್ಯಾಷನಲ್‌ ಕಾಲೇಜು ಬೆಳ್ಳಿಹಬ್ಬವನ್ನು ಉದ್ಘಾಟಿಸಿದ ಅವರು, ಕಾಲೇಜಿನ ಪ್ರಗತಿಯನ್ನು ಶ್ಲಾಘಿಸಿ, ಇತರ ಶಿಕ್ಷಣ ಸಂಸ್ಥೆಗಳು ನ್ಯಾಷನಲ್‌ ಕಾಲೇಜನ್ನು ಅನುಸರಿಸಲೆಂದು ಆಶಿಸಿದರು.

ಸಂಸತ್ತಿನಲ್ಲಿ ರಾಜ್ಯಕ್ಕೆ ನ್ಯಾಯ 15 ಎಂ.ಪಿ.ಗಳ ಭರವಸೆ
ನವದೆಹಲಿ, ಡಿ. 22 (ಪಿಟಿಐ)–
ಮೈಸೂರು–ಮಹಾರಾಷ್ಟ್ರ ಗಡಿ ವಿವಾದವನ್ನು ವಾಸ್ತವಿಕ ದೃಷ್ಟಿಯಿಂದ ‍ಪರಿಶೀಲಿಸಿ, ನ್ಯಾಯ ದೊರಕಿಸಿಕೊಡುವುದಾಗಿ ಹದಿನೈದು ಮಂದಿ ಸಂಸತ್‌ ಸದಸ್ಯರು ಮೈಸೂರು ಜನತೆಗೆ ಆಶ್ವಾಸನೆ ಇತ್ತಿದ್ದಾರೆ.

ADVERTISEMENT

ಎರಡು ಪ್ರತ್ಯೇಕ ಹೇಳಿಕೆಗಳಲ್ಲಿ ಈ ಭರವಸೆ ಇತ್ತಿರುವ ಅವರು, ಶಾಂತಿ ಹಾಗೂ ಮೈತ್ರಿಯುತ ವಾತಾವರಣದಲ್ಲಿ ವಿವಾದ ಇತ್ಯರ್ಥಪಡಿಸಲು ತಮಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಮೈಸೂರು ರಾಜ್ಯದಿಂದ ವರದಿಯಾಗಿರುವ ಹಿಂಸಾತ್ಮಕ ಪ್ರದರ್ಶನದ ಬಗ್ಗೆ ತಮ್ಮ ವ್ಯಥೆಯನ್ನು ವ್ಯಕ್ತಪಡಿಸಿ, ನ್ಯಾಯ ದೊರಕಿಸುವ ಭರವಸೆ ನೀಡಿರುವ ಸಂಸತ್‌ ಸದಸ್ಯರಲ್ಲಿ ಎನ್‌.ಡಿ. ತಿವಾರಿ, ಚಂದ್ರಶೇಖರ್‌, ಆರ್‌.ಪಿ.ಕೈತಾನ್‌ ಮತ್ತು ಗುಣಾನಂದ್‌ ಠಾಕೂರ್‌ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.