ADVERTISEMENT

ಫ್ರಾಂಕ್ ಅಪಮೌಲ್ಯವಿಲ್ಲ: ದೇಶವನ್ನು ಬೆರಗುಗೊಳಿಸಿದ ಡಿಗಾಲರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 20:00 IST
Last Updated 23 ನವೆಂಬರ್ 2018, 20:00 IST

ಫ್ರಾಂಕ್ ಅಪಮೌಲ್ಯವಿಲ್ಲ:ದೇಶವನ್ನು ಬೆರಗುಗೊಳಿಸಿದ ಡಿಗಾಲರ ನಿರ್ಧಾರ

ಪ್ಯಾರಿಸ್, ನ. 23– ಫ್ರೆಂಚ್ ಫ್ರಾಂಕನ್ನು ಅಪಮೌಲ್ಯ ಮಾಡುವುದಿಲ್ಲವೆಂದು ಇಂದು ರಾತ್ರಿ ಅಧ್ಯಕ್ಷ ಡಿಗಾಲ್ ನಿರ್ಧರಿಸಿದರು. ತಮ್ಮ ಆಡಳಿತಕ್ಕೆ ಸವಾಲು ಹಾಕುವ ಎಲ್ಲ ಅಂತರರಾಷ್ಟ್ರೀಯ ನಾಣ್ಯದ ಎದುರು ಹೋರಾಡಲೂ ಅವರು ನಿರ್ಧರಿಸಿದ್ದಾರೆ.

ಭಾರತಕ್ಕೆ ವಿಶ್ವಬ್ಯಾಂಕಿನ ಎಲ್ಲ ನೆರವು; ಮೆಕ್ನಮಾರ ಭರವಸೆ

ADVERTISEMENT

ಮುಂಬೈ, ನ. 23– ಭಾರತದ ಅಭಿವೃದ್ಧಿ ಅಗತ್ಯಗಳನ್ನು ಪೂರ್ಣವಾಗಿ ಪೂರೈಸಲು ವಿಶ್ವಬ್ಯಾಂಕ್ ಸಹಾಯ ಮಾಡುವುದು ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಮೆಕ್ನಮಾರ ಅವರು ಇಂದು ಇಲ್ಲಿ ಹೇಳಿದರು.

ರಾಷ್ಟ್ರದ ಕೃಷಿ ಅಭಿವೃದ್ಧಿ ಹಾಗೂ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ವಿಶೇಷವಾಗಿ ಬೆಂಬಲಿಸಲಾಗುವುದೆಂದು ಅವರು ತಿಳಿಸಿದರು.

ಮೆಕ್ನಮಾರ ಪತ್ರಿಕಾಗೋಷ್ಠಿ ರದ್ದು

ಮುಂಬೈ, ನ. 23– ವಿಶ್ವ ಬ್ಯಾಂಕ್ ಅಧ್ಯಕ್ಷ ಮೆಕ್ನಮಾರ ಅವರು ಇಂದು ಇಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿದರು. ಪ್ರಸಕ್ತ ಉದ್ಭವಿಸಿರುವ ಅಂತರರಾಷ್ಟ್ರೀಯ ಹಣಕಾಸಿನ ಬಿಕ್ಕಟ್ಟೇ ಇದಕ್ಕೆ ಕಾರಣ.

ಪಶ್ಚಿಮ ರಾಷ್ಟ್ರಗಳಿಗೆ ರಷ್ಯದ ಎಚ್ಚರಿಕೆ

ಮಾಸ್ಕೊ, ನ. 23– ‘ನೇಟೊ’ ಸಮರ ಕೂಟದ ಯಾವುದೇ ಕ್ರಮದ ವಿರುದ್ಧ ಕಮ್ಯುನಿಸ್ಟ್ ಬಣವನ್ನು ರಕ್ಷಿಸಲು ತಾನು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೋವಿಯತ್ ಯೂನಿಯನ್ ಇಂದು ಪಶ್ಚಿಮ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತು.

ಮುರಾರಜಿಗೆ ಲಖನೌ ವಾರ್ಸಿಟಿ ವಿದ್ಯಾರ್ಥಿಗಳ ಉದ್ರಿಕ್ತ ಸ್ವಾಗತ

ಲಖನೌ, ನ.23– ಕಪ್ಪು ಕರವಸ್ತ್ರಗಳ ಪ್ರದರ್ಶನ ‘ಮುರಾರಜಿ ವಾಪಸು ಹೋಗಿ, ನೀವು ಸರ್ವಾಧಿಕಾರಿ, ಅಯೂಬ್‌
ಖಾನರಿಗಿಂತ ಕೀಳು’– ಇದು ಲಖನೌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಆಹ್ವಾನದ ಮೇಲೆ ಭಾಷಣ ಮಾಡಲು ಬಂದ ಉಪ ಪ್ರಧಾನಮಂತ್ರಿ ಮುರಾರಜಿ ದೇಸಾಯಿಯವರಿಗೆ ಇಂದು ವಿದ್ಯಾರ್ಥಿಗಳಿಂದ ದೊರೆತ ಸ್ವಾಗತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.