ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 10-5-1971

​ಪ್ರಜಾವಾಣಿ ವಾರ್ತೆ
Published 9 ಮೇ 2021, 19:30 IST
Last Updated 9 ಮೇ 2021, 19:30 IST
   

ಕಾಳಿ ನದಿ ಯೋಜನೆ ಪ್ರಥಮ ಹಂತ ನಿರ್ಮಾಣ ಘಟ್ಟಕ್ಕೆ
ಹುಬ್ಬಳ್ಳಿ, ಮೇ 9–
ದಕ್ಷಿಣದ ವಿದ್ಯುತ್‌ ಕ್ಷಾಮಕ್ಕೆ ಸಂಜೀವಿನಿ ಎನಿಸಲಿರುವ ರಾಷ್ಟ್ರದ ಅತ್ಯಂತ ದೊಡ್ಡ ಜಲವಿದ್ಯುತ್‌ ಉತ್ಪಾದನಾ ಜಾಲ, 120 ಕೋಟಿ ರೂಪಾಯಿ ವೆಚ್ಚದ ಕಾಳಿ ನದಿ ಯೋಜನೆಯ ಪ್ರಥಮ ಹಂತ ಇಂದು ಬೆಳಿಗ್ಗೆ ವಿಧ್ಯುಕ್ತವಾಗಿ ನಿರ್ಮಾಣಘಟ್ಟ ಮುಟ್ಟಿತು.

ಇಲ್ಲಿಂದ 50 ಮೈಲಿ ದೂರದಲ್ಲಿರುವ ಪಶ್ಚಿಮಘಟ್ಟದ ಶಿಖರದ ತೇಗ–ಬೀಟೆಗಳ ಅರಣ್ಯಮಧ್ಯದ ಬೊಮ್ಮೇನಹಳ್ಳಿಯಲ್ಲಿ
ರಾಜ್ಯಪಾಲರು ಗುಂಡಿ ಒತ್ತಿದಾಗ, ನದಿಗರ್ಭದಿಂದ ಸಿಡಿದು ಒಡೆದ ಬಂಡೆಗಳು ಕಾಡಿನಲ್ಲಿ ಪ್ರತಿಧ್ವನಿಸಿ
ಶಂಕುಸ್ಥಾಪನೆಯನ್ನು ಸಾರಿದವು.

ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಮೂವತ್ತೆರಡು ಕೋಟಿ ರೂಪಾಯಿ ವೆಚ್ಚದ ಪ್ರಥಮ ಹಂತವು ಎಂಬತ್ತು ಕೋಟಿ ಯುನಿಟ್‌ ಅನ್ನು ಉತ್ಪಾದಿಸಿ, ರಾಜ್ಯದಲ್ಲಿ ಆಗತಾನೇ ಉಲ್ಬಣವಾಗತೊಡಗುವ ವಿದ್ಯುತ್‌ ಕ್ಷಾಮಕ್ಕೆ ಶಮನ ನೀಡುವುದು.

ADVERTISEMENT

ಶಕ್ತಿ ಬೆಳಕಿನ ಆಗರ
ಹುಬ್ಬಳ್ಳಿ, ಮೇ 9–
ಒಂದು ಹಿಡಿ ಸಿಡಿಮದ್ದಿನ ಸ್ಫೋಟನದೊಂದಿಗೆ, ಕಾಲಗರ್ಭದಲ್ಲಿ ಜಡ ನಿದ್ದೆಯಲ್ಲಿದ್ದ ಬೊಮ್ಮೇನಹಳ್ಳಿ ಆಧುನಿಕ ಯುಗಕ್ಕೆ ಚಿಮ್ಮಿತು.

ಕಾಡನ್ನು ಒಂದು ಕ್ಷಣದಲ್ಲಿ ಕಂಪಿಸಿ ಮೂರು ಮಾರುಗಳೆತ್ತರಕ್ಕೆ ಚಿಮ್ಮಿಸಿದ ಈ ಗುಡುಗು ಕಾಳಿ ನದಿಯನ್ನು ಶಕ್ತಿ ಬೆಳಕಿನ ಆಗರವಾಗಿ ಪರಿವರ್ತಿಸುವಲ್ಲಿ ಸಾಂಕೇತಿಕ ಪಾತ್ರ ವಹಿಸಿತು.

ಎಲ್ಲೋ ಅಲ್ಲಲ್ಲಿ ಕುಳಿತು ನೋಡುತ್ತಿದ್ದ ಪಕ್ಷಿಗಳು ಹಾರಿ ಹೋದ ನೋಟ ಸ್ಮರಣೀಯ. ಇನ್ನು ಮುಂದೆ ಈ ಸ್ಥಳ ಆ ಪಕ್ಷಿ ಪ್ರಾಣಿಗಳಿಗೆ ಸುರಕ್ಷಿತ ನೆಲೆಯಲ್ಲ. ಜನ ಬರುತ್ತಾರೆ, ಯಂತ್ರ ತರುತ್ತಾರೆ. ಅಣೆಕಟ್ಟಿನ ಅಣೆ ಏರಿಸಿ ಊರು ಬೆಳೆಸುತ್ತಾರೆ.

ದೊಡ್ಡ ಯೋಜನೆಗಳು, ಮುಖ್ಯವಾಗಿ ಜಲ ವಿದ್ಯುತ್‌ ಯೋಜನೆಗಳು ಏಳುವ ಸ್ಥಳಗಳಲ್ಲೆಲ್ಲಾ ಇದು ಅನಿವಾರ್ಯ. ಶರಾವತಿಯಲ್ಲಿ ಆಗಿತ್ತು, ಕಾಳಿಯಲ್ಲೂ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.