ADVERTISEMENT

ಭಾನುವಾರ, 7–1–1968

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 20:18 IST
Last Updated 6 ಜನವರಿ 2018, 20:18 IST
ಭಾನುವಾರ, 7–1–1968
ಭಾನುವಾರ, 7–1–1968   

ವಿಧ್ವಂಸಕ ಕೃತ್ಯ... ಗೂಢಚರ್ಯೆ ಪಾಕಿಸ್ತಾನ್ ರಾಜತಂತ್ರಜ್ಞನ ಉಚ್ಚಾಟನೆ

(ನಮ್ಮ ವಿಶೇಷ ಪ್ರತಿನಿಧಿಯಿಂದ)

ನವದೆಹಲಿ, ಜ. 6– ಇಲ್ಲಿ ಪಾಕಿಸ್ತಾನ ಹೈಕಮೀಷನ್ನಿನ ಕಾನ್ಸೆಲರ್ ಎಂ.ಎಂ. ಅಹಮದ್ ಅವರು 24 ಗಂಟೆಗಳೊಳಗಾಗಿ ಭಾರತವನ್ನು ತ್ಯಜಿಸಬೇಕೆಂದು ಸರ್ಕಾರ ತಿಳಿಸಿದೆ.

ADVERTISEMENT

ಪಾಕಿಸ್ತಾನಿ ರಾಜತಂತ್ರಜ್ಞ ಭಾರತ ಬಿಡಬೇಕೆಂದು ತಿಳಿಸಿದ ಪತ್ರವನ್ನು ವಿದೇಶಾಂಗ ಖಾತೆಯಲ್ಲಿ ಪಾಕಿಸ್ತಾನಿ ವಿಭಾಗದ ಕಾರ್ಯದರ್ಶಿಯಾಗಿರುವ ಶ್ರೀ ಪಿ.ಆರ್.ಎಸ್. ಮಣಿ ಅವರು ಪಾಕಿಸ್ತಾನ ಡೆಪ್ಯುಟಿ ಹೈಕಮಿಷನರ್ ಅಬ್ದುಲ್ ರಾಫ್ ಖಾನ್ ಅವರಿಗೆ ಇಂದು ಸಂಜೆ 7.30ಕ್ಕೆ ನೀಡಲಾಯಿತು.

ಭಾರತದ ಭದ್ರತೆಗೆ ಅಪಾಯವೊಡ್ಡುವ ಗೂಢಚರ್ಯೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಅವರು ತೊಡಗಿದ್ದರೆಂದು ಭಾರತ ಸರ್ಕಾರ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನದಿಂದ ಭಾರತದ ಹೈಕಮಿಷನ್ ಕಾರ್ಯದರ್ಶಿ ಶ್ರೀ ಓಜಾ ಉಚ್ಚಾಟನೆ

ನವದೆಹಲಿ, ಜ. 6– ಡಾಕ್ಕಾದಲ್ಲಿರುವ ಭಾರತದ ಡೆಪ್ಯುಟಿ ಹೈಕಮಿಷನ್ ಕಚೇರಿಯ ಪ್ರಥಮ ಕಾರ್ಯದರ್ಶಿ ಶ್ರೀ ಪಿ.ಎನ್. ಓಜಾ ಅವರನ್ನು ಪಾಕಿಸ್ತಾನ ಇಂದು ಉಚ್ಛಾಟಿಸಿದೆ.

ಇಂದು ರಾತ್ರಿ ಡಾಕ್ಕಾವನ್ನು ಬಿಡಬೇಕೆಂದು ಶ್ರೀ ಓಜಾ ಅವರಿಗೆ ತಿಳಿಸಲಾಗಿದೆ.

ಷೇಖ್‌ರನ್ನು ಭಾರತದ ಹೊರಗೆ ಬಿಡುವುದು ಸಲ್ಲದು: ಹನುಮಂತಯ್ಯ

ನವದೆಹಲಿ, ಜ. 6– ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಜತೆ ಸಂಧಾನ ನಡೆಸಲು ಅಥವಾ ಇನ್ನಾವುದೇ ಉದ್ದೇಶಕ್ಕೆ ಷೇಖ್ ಅಬ್ದುಲ್ಲಾ ಅವರನ್ನು ಭಾರತದ ಹೊರಗೆ ಕಳಿಸುವುದನ್ನು ಯೋಚಿಸುವುದು ಕೂಡ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಉಪ ನಾಯಕ ಶ್ರೀ ಹನುಮಂತಯ್ಯ ಇಂದು ಇಲ್ಲಿ ಹೇಳಿದರು.

ಷೇಖ್ ಅವರ ಹೇಳಿಕೆಯ ಕಾಯ್ದೆ ಅರ್ಥ ವ್ಯಾಪ್ತಿ ಎಷ್ಟೆಂದು ಸರ್ಕಾರ ಪರಿಶೀಲಿಸಬೇಕೆಂದು ಶ್ರೀ ಹನುಮಂತಯ್ಯ ಒತ್ತಾಯಪಡಿಸಿದರು.

ಉರಗ ಉಡುಗೊರೆ

ಪಣಜಿ, ಜ. 6– ಇಲ್ಲಿನ ಪತ್ರಕರ್ತರೊಬ್ಬರಿಗೆ ಕಳೆದವಾರ ವಿಷಮಯ ಕಾಣಿಕೆಯೊಂದು ದೊರೆಯಿತು.

ಇಂಗ್ಲೀಷ್ ದೈನಿಕವೊಂದರಲ್ಲಿ ಕೆಲಸ ಮಾಡುತ್ತಿರುವ ಮೈಸಿರಿಲ್ ಡಿ. ಕುನ್ಹ ಅವರು ಬುಧವಾರ ತಮ್ಮ ಕಚೇರಿಗೋದಾಗ ಹೊಸ ವರ್ಷದ ಶುಭಾಶಯ’ ಅವರಿಗಾಗಿ ಕಾದಿತ್ತು.

ಇಪ್ಪತ್ತೈದು ಪೈಸೆ ಅಂಚೆ ಚೀಟಿ ಅಂಟಿಸಿಕೊಂಡು ಬಂದಿದ್ದ ಶುಭಾಶಯದ ಲಕೋಟೆಯನ್ನು ತೆರೆದಾಗ, ಅದರಲ್ಲಿ ಜೀವಂತ ಹಾವು ಇದ್ದುದನ್ನು ನೋಡಿ ಕುನ್ಹ ಮತ್ತು ಅವರ ಸಹೋದ್ಯೋಗಿಗಳು ಹೌಹಾರಿದರು. ಈ ಹಾವಿನ ಜೊತೆಗೆ ‘ಶುಭಾಶಯಗಳೊಡನೆ’ ಎಂಬ ಚೀಟಿ ಬೇರೆ.

ಲಂಡನ್ನಿನಿಂದ ಚೀನಕ್ಕೆ ಚಿನ್ನ

ಲಂಡನ್, ಜ. 6– ದೀರ್ಘಕಾಲದ ನಂತರ ಚೀನ ಪುನಃ ಲಂಡನ್ ಮಾರುಕಟ್ಟೆಯಿಂದ ಚಿನ್ನ ಕೊಳ್ಳಲಾರಂಭಿಸಿದೆ.

ನಿನ್ನೆ ಲಂಡನ್ನಿನಿಂದ ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಚೀನಕ್ಕೆ ಸಾಗಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.