ADVERTISEMENT

ಹಣದುಬ್ಬರದ ನಿಯಂತ್ರಣ ಆದ್ಯತೆಯ ಗುರಿಯಾಗಲಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 15:44 IST
Last Updated 12 ಏಪ್ರಿಲ್ 2022, 15:44 IST

ಬೆಲೆಗಳಲ್ಲಿ ನಿರಂತರವಾಗಿ ಏರಿಕೆಯಾಗುವುದನ್ನು ಹಣದುಬ್ಬರ ಎನ್ನಲಾಗಿದೆ. ಇಂದು ನಮ್ಮಲ್ಲಿ ನಿರುದ್ಯೋಗ, ವರಮಾನದಲ್ಲಿನ ಕುಸಿತ, ಆರೋಗ್ಯ ಸೇವಾ ವೆಚ್ಚದಲ್ಲಿನ ಏರಿಕೆಯಿಂದಾಗಿ ದುಡಿಮೆಗಾರರ ಬದುಕು ಮೂರಾ ಬಟ್ಟೆಯಾಗಿದೆ. ಬೆಲೆ ಏರಿಕೆಯಿಂದ ಹಣದ ಕೊಳ್ಳುವ ಶಕ್ತಿ ಇಳಿಯುತ್ತದೆ ಮತ್ತು ಜನರ ನಿಜ ವರಮಾನದಲ್ಲಿ ಕುಸಿತವುಂಟಾಗುತ್ತದೆ (ಪ್ರ.ವಾ., ಏ. 12). ರಾಜ್ಯದ 2022-23ನೆಯ ಸಾಲಿನ ಒಟ್ಟು ಸ್ವಂತ ತೆರಿಗೆ ರಾಶಿ ₹ 1.27 ಲಕ್ಷ ಕೋಟಿ. ಇದರಲ್ಲಿ ಸರಿಸುಮಾರು ಶೇ 92ರಷ್ಟು ಅಪ್ರತ್ಯಕ್ಷ ತೆರಿಗೆಗಳಾಗಿವೆ (ಎಸ್‍ಜಿಎಸ್‍ಟಿ, ರಾಜ್ಯ ಅಬಕಾರಿ, ವಾಹನ ತೆರಿಗೆ, ಮುಂದ್ರಾಂಕ-ನೋಂದಣಿ ಶುಲ್ಕ, ಮಾರಾಟ ತೆರಿಗೆ (ವ್ಯಾಟ್) ಇತ್ಯಾದಿ). ಈ ಕಾರಣದಿಂದ ಹಣದುಬ್ಬರದ ಯಮಘಾತದಿಂದ ದುಡಿಮೆಗಾರರ ಬದುಕು ದುಃಸ್ಥಿತಿಗೊಳಗಾಗುತ್ತದೆ.

ನಮ್ಮಲ್ಲಿ 2020-21ರ ತಲಾ ಕೃಷಿ ಜಿಎಸ್‍ಡಿಪಿ ₹ 29,502ರಷ್ಟಿದ್ದರೆ ಕೈಗಾರಿಕೆ- ಸೇವಾ ವಲಯಗಳ ತಲಾ ಜಿಎಸ್‍ಡಿಪಿ ₹ 1,93,921ರಷ್ಟಿದೆ. ಹಣದುಬ್ಬರದಿಂದಾಗಿ ಗ್ರಾಮೀಣ ರೈತಾಪಿ- ಭೂರಹಿತ ದುಡಿಮೆಗಾರರ ಬದುಕು ಸಹಜವಾಗಿ ಕುಸಿತಕ್ಕೆ ಒಳಗಾಗುತ್ತದೆ. ಈಗಾಗಲೇ ಎಲ್ಲ ಬಗೆಯ ಅಸಮಾನತೆಯನ್ನು ಎದುರಿಸುತ್ತಿರುವ ಆರ್ಥಿಕತೆಯಲ್ಲಿ ಹಣದುಬ್ಬರ ಇದನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಬಜೆಟ್ಟಿನ ಬಹುಮುಖ್ಯ ಉದ್ದೇಶ ಆರ್ಥಿಕ ಸ್ಥಿರತೆಯನ್ನು- ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವುದು. ಈಗ ಎರಡಂಕಿಗಳತ್ತ ಸಾಗುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವುದು ನಮಗೆ ನಿರ್ಣಾಯಕ ಗುರಿಯಾಗಬೇಕು.

ಟಿ.ಆರ್.ಚಂದ್ರಶೇಖರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.