ADVERTISEMENT

ಸೋಮವಾರ, 23–5–1994

​ಪ್ರಜಾವಾಣಿ ವಾರ್ತೆ
Published 22 ಮೇ 2019, 18:30 IST
Last Updated 22 ಮೇ 2019, 18:30 IST

ಅಮೆರಿಕದ 30 ಶತಕೋಟಿ ಡಾಲರ್ ಬಂಡವಾಳ ನಿರೀಕ್ಷೆ

ವಾಷಿಂಗ್‌ಟನ್, ಮೇ 22 (ಯುಎನ್‌ಐ)– ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಒಂದು ವಾರ ಕಾಲ ಅಮೆರಿಕಕ್ಕೆ ಭೇಟಿ ನೀಡಿ ನಡೆಸಿರುವ ವಾಣಿಜ್ಯ ಮಾತುಕತೆಗಳ ಪರಿಣಾಮವಾಗಿ ಭಾರತಕ್ಕೆ ಅಮೆರಿಕದಿಂದ ಮುಂದಿನ ಎರಡು–ಮೂರು ವರ್ಷಗಳಲ್ಲಿ 2,500ರಿಂದ 3,000 ಕೋಟಿ ಡಾಲರ್‌ಗಳ ಬಂಡವಾಳ ಹರಿದು ಬರಲಿದೆ.

ಪ್ರಧಾನಿ ಅವರೊಂದಿಗೆ ಅಮೆರಿಕ ಪ್ರವಾಸ ಹೋಗಿರುವ ಹಿರಿಯ ಅಧಿಕಾರಿಗಳ ಪ್ರಕಾರ ಈ ಬಂಡವಾಳವು ಮೂಲಸೌಲಭ್ಯ ಕ್ಷೇತ್ರದಲ್ಲಿ ಲಭ್ಯವಾಗಲಿದೆ. ವಿದ್ಯುತ್ ಮತ್ತು ಇಂಧನ ವಲಯಗಳಲ್ಲಿ ಹೆಚ್ಚಾಗಿ ಅಮೆರಿಕದ ಉದ್ಯಮಿಗಳು ಬಂಡವಾಳ ಹೂಡಲಿದ್ದಾರೆ.

ADVERTISEMENT

ವಿದ್ಯುತ್ ಅಲ್ಲದೆ ಇಲೆಕ್ಟ್ರಾನಿಕ್ಸ್, ದೂರಸಂಪರ್ಕ, ಸಾಫ್ಟ್‌ವೇರ್ ಅಭಿವೃದ್ಧಿ, ಆಹಾರ ಸಂಸ್ಕರಣೆ, ತೈಲ ಮತ್ತು ಹೈಡ್ರೋಕಾರ್ಬನ್ಸ್ ವಿಭಾಗಗಳಲ್ಲಿ ಈಗಾಗಲೇ ಭಾರತ–ಅಮೆರಿಕ ಜಂಟಿ ಸಂಸ್ಥೆಗಳು ಸ್ಥಾಪನೆಯಾಗುತ್ತಿರುವುದು ಅಮೆರಿಕದ ಹಲವು ಕಂಪನಿಗಳಿಗೆ ಆಸಕ್ತಿ ಹುಟ್ಟಿಸಿದೆ.

ಎಸ್‌ಪಿಜಿ ವಾಪಸ್– ವಿ.ಪಿ. ಸಿಂಗ್ ಮನವಿ

ನವದೆಹಲಿ, ಮೇ 22 (ಯುಎನ್‌ಐ)– ಮಾಜಿ ಪ್ರಧಾನಿ ಹಾಗೂ ಜನತಾ ದಳ ನಾಯಕ ವಿ.ಪಿ. ಸಿಂಗ್ ಅವರು ತಮಗೆ ಒದಗಿಸಲಾಗಿರುವ ವಿಶೇಷ ರಕ್ಷಣಾ ದಳ (ಎಸ್.ಪಿ.ಜಿ)ವನ್ನು ವಾಪಸ್ ಪಡೆಯುವಂತೆ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರಿಗೆ ಇಂದು ಮನವಿ ಮಾಡಿದ್ದಾರೆ.

ಎಸ್.ಪಿ.ಜಿ. ವ್ಯವಸ್ಥೆಗಳು ತುಂಬಾ ದುಬಾರಿ ಎಂಬ ಕಾರಣಕ್ಕಾಗಿ ಅವರು ಮನವಿ ಮಾಡಿದ್ದಾರೆ. ಸರ್ಕಾರವು ರಕ್ಷಣಾದಳವನ್ನು ಹಿಂತೆಗೆಯದಿದ್ದರೂ ತಾವು ಅದರ ನೆರವಿಲ್ಲದೆ ಇರಲು ಬಯಸುವುದಾಗಿ ಸಿಂಗ್ ತಿಳಿಸಿದ್ದಾರೆ.

ಕಾಶ್ಮೀರ ಸಂಧಾನಕ್ಕೆ ಸರಕಾರ ಸಿದ್ಧ

ನವದೆಹಲಿ, ಮೇ 22 (ಪಿಟಿಐ)– ಕಾಶ್ಮೀರದಲ್ಲಿ ಮಾಮೂಲಿ ಪರಿಸ್ಥಿತಿ ಸ್ಥಾಪನೆಗೆ ನೆರವಾಗುವುದಿದ್ದರೆ ಸರಕಾರ ಅಲ್ಲಿನ ಸಮಸ್ಯೆಗಳ ಕುರಿತು ಯಾರೊಂದಿಗೂ ಮಾತುಕತೆಗೆ ಸಿದ್ಧ ಎಂದು ಆಂತರಿಕ ಭದ್ರತಾ ಸಚಿವ ರಾಜೇಶ್ ಪೈಲಟ್ ಅವರು ಹೇಳಿದ್ದಾರೆ.

ಪೂರ್ವ ಷರತ್ತುಗಳಿಲ್ಲದೆ ಮಾತುಕತೆಗೆ ಸರಕಾರ ಸಿದ್ಧವಿದ್ದರೆ ತಮ್ಮ ಸಂಘಟನೆ ಹಿಂಸಾಚಾರ ತೊರೆಯಲು ಸಿದ್ಧ ಎಂಬ ಜೆಕೆಎಲ್‌ಎಫ್ ಅಧ್ಯಕ್ಷ ಯಾಸಿನ್ ಮಲಿಕ್ ಅವರ ಹೇಳಿಕೆಯ ಬಗ್ಗೆ ಪೈಲಟ್ ಪ್ರತಿಕ್ರಿಯೆ ನೀಡುತ್ತ ‘ಮಾತುಕತೆ ನಮ್ಮೊಳಗೆ ಮಾತ್ರ ನಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.