ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್‌ಗೆ ಜನತಾ ಪಕ್ಷದ ಬೆಂಬಲ
ಬೆಂಗಳೂರು, ಡಿ. 7– 'ರಾಜ್ಯದ ಹಿತದೃಷ್ಟಿಯಿಂದ’ ಪ್ರಧಾನಿ ಇಂದಿರಾ ಅವರ ಕಾಂಗ್ರೆಸ್ಸಿನೊಂದಿಗೆ ಸಹಕರಿಸಿ ನಡೆಯಲು ವಿಧಾನಸಭೆಯ ಜನತಾಪಕ್ಷದ ಸದಸ್ಯರು ನಿರ್ಧರಿಸಿದ್ದಾರೆ
ಈ ಸಂಬಂಧದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಪಕ್ಷದ ಅಧ್ಯಕ್ಷ ಶ್ರೀ ಎಸ್. ಚನ್ನಯ್ಯ ಅವರಿಗೆ ವಹಿಸಿಕೊಡಲಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಒಟ್ಟು ಹದಿಮೂರು ಮಂದಿ ಜನತಾ ಪಕ್ಷದ ಸದಸ್ಯರಿದ್ದಾರೆ.
ಆಡಳಿತದ ಎಲ್ಲ ಘಟ್ಟಗಳಲ್ಲಿ ಕನ್ನಡ: ಸರಕಾರದ ತೊಂದರೆ ನೀಗಲು ಪರಿಷತ್ ಸಿದ್ಧ
ಬೆಂಗಳೂರು, ಡಿ. 7– ಕನ್ನಡವನ್ನು ಎಲ್ಲ ಘಟ್ಟಗಳಲ್ಲಿ ಆಡಳಿತ ಭಾಷೆಯನ್ನಾಗಿ ಮಾಡುವುದನ್ನು ಮುಂದಕ್ಕೆ ತಳ್ಳುತ್ತಾ ಹೋದರೆ ಪ್ರತಿಕೂಲ ಪರಿಸ್ಥಿತಿಯುಂಟಾದೀತೆಂದು ಭಯ ಪಡುವ ಕನ್ನಡ ಸಾಹಿತ್ಯ ಪರಿಷತ್ತು ಸರಕಾರಕ್ಕಿರಬಹುದಾದ ತೊಂದರೆಗಳನ್ನು ನೀಗಲು ಮುಂದೆ ಬಂದಿದೆ.
‘ಸರಕಾರ ಒಪ್ಪಿದರೆ’ ಕಾರ್ಯಗತ ಮಾಡಲು ಪರಿಷತ್ತು ರೂಪಿಸಿಕೊಂಡಿರುವ ಯೋಜನೆಯನ್ನು ಇಂದು ಹೊರಗೆಡಹಿದ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ನಾರಾಯಣರವರು ಈ ಯೋಜನೆಯ ಪರಿಣಾಮವಾಗಿ ಕನ್ನಡವು ಬೇಡ ಆಡಳಿತ ಭಾಷೆಯಾದೀತೆಂದು ಆಶಿಸಿದರು.
ಪ್ರಜಾತಂತ್ರದಲ್ಲಿ ಭಿನ್ನಮತ ಸಹಜ: ಒಡಕಿನಿಂದ ಯಾರೂ ಎದೆಗುಂದಬೇಕಾಗಿಲ್ಲ; ಎಸ್ಸೆನ್
ದಾವಣಗೆರೆ, ಡಿ. 7– ‘ನಾವು ಸ್ವತಂತ್ರ ಭಾರತದ ಪ್ರಜೆಗಳು. ನಾವು ಇಚ್ಚಿಸುವ ತತ್ವ ಅನುಸರಿಸಿ ಆಡಳಿತ ನಡೆಸುವ ಸರ್ಕಾರವನ್ನು ಆರಿಸುವ ಹಕ್ಕು ನಮಗಿದೆ. ರಾಜಕೀಯ ಗೊಂದಲಗಳು ಮತ್ತು ರಾಜಕೀಯ ಒತ್ತಡಗಳ ಕಾರಣ ನಾವು ಹೋರಾಡಿ ಗಳಿಸಿರುವ ಮೂಲಭೂತ ಹಕ್ಕುಗಳನ್ನು ತ್ಯಾಗ ಮಾಡಬೇಕಾಗಿಲ್ಲ. ಕಾಂಗ್ರೆಸ್ ಇಬ್ಭಾಗವಾದುದರಿಂದ ಯಾರೂ ಭಯಪಡಬೇಕಾಗಿಲ್ಲ’ ಎಂದು ಸಿಂಡಿಕೇಟ್ ಗುಂಪಿನ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.1.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಜನತಾಬಜಾರ್ ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಿಜಲಿಂಗಪ್ಪನವರು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.