ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಶುಕ್ರವಾರ, 12–12–1969

1969

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 20:00 IST
Last Updated 11 ಡಿಸೆಂಬರ್ 2019, 20:00 IST

ಬಿಹಾರ ಸಂಯುಕ್ತರಂಗ ಸಚಿವರಿಂದ ಅಧಿಕಾರ ದುರುಪಯೋಗ: ವರದಿ

ಪಟ್ನಾ, ಡಿ. 11– ಬಿಹಾರದ ಪ್ರಥಮ ಸಂಯುಕ್ತ ರಂಗ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಮಹಾಮಾಯ ಪ್ರಸಾದ್ ಸಿನ್ಹಾ ಮತ್ತು ಅವರ ಸಂಪುಟದಲ್ಲಿದ್ದ ಹನ್ನೆರಡು ಮಂದಿ ಸಚಿವರ ವಿರುದ್ಧ ಮಾಡಲಾಗಿದ್ದ ಆಪಾದನೆಗಳನ್ನು ಮುಧೋಳ್ಕರ್ ವಿಚಾರಣಾ ಆಯೋಗ ತಿರಸ್ಕರಿಸಿದೆ.

1967ರ ಸಾರ್ವತ್ರಿಕ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಸಂಯುಕ್ತರಂಗ ಸಂಪುಟದಲ್ಲಿ ಗಣಿ ಮತ್ತು ಖನಿಜಗಳು ಹಾಗೂ ಲೋಕೋಪಯೋಗಿ ಶಾಖೆ ಸಚಿವರಾಗಿದ್ದ ರಾಮಗಡದ ರಾಜ ಕಾಮಾಕ್ಷ ನಾರಾಯಣ್‌ಸಿಂಗ್ ಅವರು ಅಧಿಕಾರ ದುರುಪ‍ಯೋಗ ಪಡಿಸಿಕೊಂಡಿದ್ದಾರೆ ಮತ್ತು ಸ್ವೇಚ್ಛಾನುಸಾರದ ಕ್ರಮಗಳನ್ನು ಕೈಗೊಂಡಿದ್ದಾರೆಂಬ ಆಪಾದನೆಗಳನ್ನು ಮುಧೋಳ್ಕರ್ ಆಯೋಗ ಎತ್ತಿ ಹಿಡಿದಿದೆ.

ADVERTISEMENT

ಪ್ರೇರಕ ಶಕ್ತಿಯ ಸಂಕೇತ ಇಂದಿರಾ: ಬೆಂಬಲಕ್ಕೆ ಸಿ. ಸುಬ್ರಹ್ಮಣ್ಯಂ ಕರೆ

ನವದೆಹಲಿ, ಡಿ. 11– ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಪರವಾದ ಎಲ್ಲಾ ಪ್ರೇರಕ ಶಕ್ತಿಯ ಸಂಕೇತವಾಗಿರುವ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಗೆ ಬೆಂಬಲ ನೀಡಬೇಕೆಂದು ಹಂಗಾಮಿ ಕಾಂಗ್ರೆಸ್ ಅಧ್ಯಕ್ಷ ಸಿ. ಸುಬ್ರಹ್ಮಣ್ಯಂ ಅವರು ಎಲ್ಲಾ ಕಾಂಗ್ರೆಸ್ಸಿಗರಿಗೆ ಕರೆ ಇತ್ತಿದ್ದಾರೆ.

ಪಕ್ಷದಲ್ಲಿನ ದಬ್ಬಾಳಿಕೆ ಮತ್ತು ಅಧಿಕಾರಶಾಹಿಗಳಿಗೆ ನಾವೆಲ್ಲಾ ವಿರೋಧವಾಗಿದ್ದೇವೆ ಎಂದು ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ ಮುಂಬೈ ಅಧಿವೇಶನದ ಹಿನ್ನೆಲೆಯನ್ನು ಅವರು ಕೂಲಂಕಷವಾಗಿ ವಿಶ್ಲೇಷಿಸಿದ್ದಾರೆ.

ಸಿಂಡಿಕೇಟ್ ದರ್ಪವು ಅಧಿಕಾರ ಪ್ರವೃತ್ತಿಯ ಸಂಕೇತವಾಗಿರುವುದೆಂದೂ, ನಮ್ಮೆಲ್ಲರ ನಿಷ್ಠೆ ಏಕೈಕ ವ್ಯಕ್ತಿಗಲ್ಲದೆ ಪಕ್ಷದ ನೀತಿ, ಕಾರ್ಯಕ್ರಮಗಳಿಗಾಗಿ ಮೀಸಲಾಗಿರುವುದೆಂದೂ ಅವರು ತಿಳಿಸಿದ್ದಾರೆ.

ಜಿನ್ನಾ ಆಸ್ತಿಗೆ ಯಾರ ಹಕ್ಕು?

ನವದೆಹಲಿ, ಡಿ. 11– ಪಾಕಿಸ್ತಾನದ ಸಂಸ್ಥಾಪಕ ಮಹಮದಾಲಿ ಜಿನ್ನಾ ಅವರು ಷಿಯಾ ಪಂಗಡಕ್ಕೆ ಸೇರಿದವರೇ ಅಥವಾ ಸುನ್ನಿ ಪಂಗಡಕ್ಕೆ ಸೇರಿದವರೇ?

ಇದು ಪಾಕಿಸ್ತಾನ್ ಹೈಕೋರ್ಟಿನ ಮುಂದಿರುವ ಬೃಹತ್‌ ಸಮಸ್ಯೆ. ಈ ಪ್ರಶ್ನೆಯ ಇತ್ಯರ್ಥ ಆಗಬೇಕಾಗಿದೆ.

ತಮ್ಮ ಅಕ್ಕ ಫಾತಿಯಾ ಜಿನ್ನಾ ಮತ್ತು ಮಹಮದಾಲಿ ಜಿನ್ನಾ ಅವರು ಬಿಟ್ಟು ಹೋದ ಸಮಸ್ತ ಆಸ್ತಿಗೂ ತಾವೇ ನ್ಯಾಯವಾದ ಹಕ್ಕುದಾರರೆಂದು ಘೋಷಿಸುವಂತೆ ಜಿನ್ನಾರ ಸೋದರಿ ಮಿಸ್ ಷಿರಿನ್ ಬಾಯಿ ಜಿನ್ನಾ ಅವರು ಸಲ್ಲಿಸಿರುವ ಅರ್ಜಿಯಿಂದ ಈ ಪ್ರಶ್ನೆ ಉದ್ಭವಿಸಿದೆ.

ಮಹಮದಾಲಿ ಜಿಲ್ಲಾ ಅವರ ಆಸ್ತಿಯಲ್ಲಿ ಬಹುಪಾಲು ಮಿಸ್‌ ಫಾತಿಮಾ ಜಿನ್ನಾ ಅವರ ಮೂಲಕ ಬಂದದ್ದೇ. ಪೂನಾದಲ್ಲಿದ್ದ ಷಿರಿನ್ ಬಾಯಿ ಜಿನ್ನಾ ಅವರು ತಮ್ಮ ಅಕ್ಕ ಸತ್ತ ನಂತರ, ಎರಡು ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.