ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಮಂಗಳವಾರ, 20.6.1972

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 19:30 IST
Last Updated 19 ಜೂನ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಎರಡೂ ಕಾಂಗ್ರೆಸ್ಸಿಗೆ ತಲಾ 3 ಸ್ಥಾನಗಳು: ಇನ್ನೊಂದು ಪಕ್ಷೇತರರಿಗೆ

ಬೆಂಗಳೂರು, ಜೂನ್ 19– ಮೂರು ಸ್ಥಾನ ಗಳು ಕಾಂಗ್ರೆಸ್ಸಿಗೆ, ಮೂರು ಸ್ಥಾನಗಳು ಸಂಸ್ಥಾ ಕಾಂಗ್ರೆಸ್ಸಿಗೆ, ಒಂದು ಜನಸಂಘದ ಬೆಂಬಲ ಪಡೆದ ಪಕ್ಷೇತರರಿಗೆ.

ಚುನಾವಣೆ ನಡೆದ 11 ವಿಧಾನಪರಿಷತ್ ಸ್ಥಾನಗಳಲ್ಲಿ ಇಂದು ಪ್ರಕಟವಾದ ಏಳು ಸ್ಥಾನಗಳಲ್ಲಿ ಈ ರೀತಿಯ ಫಲಿತಾಂಶ ಬಂದಿದೆ.

ADVERTISEMENT

ಕನ್ನಡದಲ್ಲಿ ನವೋದಯ ಸಾಹಿತ್ಯದ ದ್ರೋಣಾಚಾರ್ಯ ಶ್ರೀನಿವಾಸರಿಗೆ ಸನ್ಮಾನ

ಬೆಂಗಳೂರು, ಜೂನ್ 19– 81 ತುಂಬಿದ ಸಣ್ಣ ಕತೆಗಳ ‘ಶ್ರೀನಿವಾಸ’ ‘ಕನ್ನಡ ನವೋದಯ ಸಾಹಿತ್ಯದ ದ್ರೋಣಾಚಾರ್ಯ’ ಎಂದು ವರ್ಣಿಸಲ್ಪಟ್ಟಾಗ, ‘ಶತಾಯುವಾಗಿ ಬಾಳು’ ಎಂದು ಹರಸಿದರು ‘ನವೋದಯ ಸಾಹಿತ್ಯದ ಭೀಷ್ಮಾಚಾರ್ಯ’ ಡಿ.ವಿ.ಜಿ.

ನವೋದಯ ಸಾಹಿತ್ಯದ ಈ ಭೀಷ್ಮ, ದ್ರೋಣರನ್ನು ಒಂದೇ ವೇದಿಕೆಯಲ್ಲಿ ಏಕಕಾಲದಲ್ಲಿ ಕಾಣುವ ಈ ಅಪೂರ್ವ ಸುಯೋಗ ಒದಗಿದ್ದು, ಹಿರಿಯ ಸಾಹಿತಿ ಗಳಿಗೆ ಸಂಭಾವನಾ ಗ್ರಂಥ ಅರ್ಪಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೇ ‘ಶ್ರೀನಿವಾಸ’ ಸಂಭಾವನಾ ಗ್ರಂಥವನ್ನು ಅರ್ಪಿಸಿದ ಸಮಾರಂಭದಲ್ಲಿ.

‘ಜೀವನವನ್ನೇ ತಮ್ಮ ಸಂದೇಶಗಳ ದರ್ಪಣವನ್ನಾಗಿ ಮಾಡಿಕೊಂಡ’ಶ್ರೀ ಮಾಸ್ತಿ ಅವರಿಗೆ 81 ತುಂಬಿದೆ. ಅವರು ನೂರು ಕಾಲ ಬಾಳಲಿ, ನೂರಕ್ಕೂ ಹೆಚ್ಚು ಕಾಲ ಬಾಳಲಿ ಎಂದು ‘ಕಿರಿಯ’ ಸಾಹಿತಿಗಳ ಹಾರೈಕೆ, ಡಿ.ವಿ.ಜಿ ಅವರ ಆಶೀರ್ವಾದ.

ಅಭಿನಂದನ ಭಾಷಣ ಮಾಡಿದ ಪ್ರೊ.ವಿ. ಸೀತಾರಾಮಯ್ಯ ಅವರು, ನಾಟಕ, ಕವಿತೆ, ವಿಮರ್ಶೆ, ಸಣ್ಣಕತೆಗಳನ್ನೆಲ್ಲ ಬರೆದಿದ್ದರೂ ಮಾಸ್ತಿಯವರನ್ನು ಸಣ್ಣಕತೆಗಳ ‘ಶ್ರೀನಿವಾಸ’ ಎಂದು ಕರೆಯುವುದನ್ನು ಆಕ್ಷೇಪಿಸಿದರು. ‘ಮಾಸ್ತಿಯವರಿಗೆ ಸಂಭಾವನಾ ಗ್ರಂಥ ಅರ್ಪಿಸುವ ಕಾರ್ಯ 30–40 ವರ್ಷಗಳ ಹಿಂದೆಯೇ ಆಗಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.