ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ 6.7.1972

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 19:30 IST
Last Updated 5 ಜುಲೈ 2022, 19:30 IST
   

ಹಿಂದಿನ ಸರ್ಕಾರಕ್ಕೆ ಮಸಿ ಬಳಿಯುವ ಯತ್ನ: ಹೆಗಡೆ ಖಂಡನೆ

ಬೆಂಗಳೂರು, ಜುಲೈ 5– ‘ಕೆಲವು ಮಂತ್ರಿಗಳು ಹಿಂದಿನ ಸರಕಾರದ ಮೇಲೆ ಬಸಿ ಬಳಿಯುವ ಒಂದೇ ಕಾರ್ಯಕ್ರಮವನ್ನು ಇರಿಸಿಕೊಂಡಿದ್ದಾರೆ’ ಎಂದು ಟೀಕಿಸಿದ ಮಾಜಿ ಹಣಕಾಸು ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು, ‘ಹಿಂದಿನ ಸರಕಾರ, ಭ್ರಷ್ಟಾಚಾರ, ಅನೀತಿಯ ಕಾರ್ಯಗಳನ್ನೇ ನಡೆಸಿದೆ ಎಂದು ಈಗಿನ ಸರ್ಕಾರ ಭಾವಿಸಿದರೆ, ಹಿಂದಿನ ಸರಕಾರದ ಎಲ್ಲ ಕೆಲಸ ಕಾರ್ಯಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.

ಶರಾವತಿ ಕರ್ಮಕಾಂಡ: ಎಚ್.ಎಂ.ಸಿ ಪ್ರಥಮ ಆಪಾದಿತರೆಂದು ವೀರೇಂದ್ರ

ADVERTISEMENT

ಬೆಂಗಳೂರು, ಜುಲೈ 5– ಶರಾವತಿ ‘ಕರ್ಮ ಕಾಂಡ’ದ ವಿಚಾರದಲ್ಲಿ ಸಚಿವ ಶ್ರೀ ಚನ್ನಬಸಪ್ಪ ಅವರು ಮಾಡಿದ ಕೋಲಾಹಲಕಾರಿ ಹೇಳಿಕೆ ಮೈಸೂರಿನ ಎಂಜಿನಿಯರುಗಳನ್ನು ಮತ್ತು ಹಿಂದಿನ ಸರ್ಕಾರವನ್ನು ಅವಹೇಳನ ಮಾಡುವ ದುರುದ್ದೇಶದಿಂದ ಕೂಡಿದೆಯೆಂದು ಸಂಸ್ಥಾ ಕಾಂಗ್ರೆಸ್‌ನ ಪ್ರದೇಶ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಆಪಾದಿಸಿ ಜನತೆಯ ಮನಸ್ಸಿನಲ್ಲಿ ಉಂಟಾಗಿರುವ ತಪ್ಪು ಅಭಿಪ್ರಾಯ ಹೋಗಲಾಡಿಸಲು ನ್ಯಾಯಾಂಗ ತನಿಖೆ ಆಗಬೇಕೆಂದು ಒತ್ತಾಯ ಮಾಡಿದರು.

ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಶರಾವತಿಯಂತಹ ಕೆಲಸದಲ್ಲಿ ನುರಿತ ಒಬ್ಬಿಬ್ಬ ಎಂಜಿನಿಯರಿಂಗ್ ತಜ್ಞರನ್ನೊಳಗೊಂಡ ವಿಚಾರಣಾ ಆಯೋಗ ರಚಿತವಾಗಬೇಕೆಂದು ಅವರು ಪತ್ರಿಕಾ
ಗೋಷ್ಠಿಯಲ್ಲಿ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.