ADVERTISEMENT

ಮಂಗಳವಾರ, 9–9–1969

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:15 IST
Last Updated 8 ಸೆಪ್ಟೆಂಬರ್ 2019, 20:15 IST
   

ಆಪಾದನೆಗಳನ್ನು ಕುರಿತು ಯು.ಜಿ.ಸಿ. ಇಂದ ತನಿಖೆ

ಬೆಂಗಳೂರು, ಸೆ. 8– ವಿಶ್ವವಿದ್ಯಾನಿಲಯ ಆಡಳಿತದ ಮೇಲೆ ಮಾಡಿರುವ ಆಪಾದನೆಗಳ ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ ವಿಚಾರಣೆ ನಡೆಸುವ ಭರವಸೆಯನ್ನು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಮುಷ್ಕರ ಹಾಗೂ ಉಪವಾಸವನ್ನು ನಿಲ್ಲಿಸಬೇಕೆಂದು ಇಂದು ರಾತ್ರಿ ವಿದ್ಯಾರ್ಥಿ ಕ್ರಿಯಾ ಸಮಿತಿಯನ್ನು ಪ್ರಾರ್ಥಿಸಿದರು.

ಕ್ರಿಯಾ ಸಮಿತಿಯ ಪ್ರಾರ್ಥನೆ ಮೇರೆಗೆ ಶಿಕ್ಷಣ ಸಚಿವರು ತಮ್ಮ ಸಲಹೆಯನ್ನು ಕುರಿತು ಮಂಗಳವಾರ 12 ಗಂಟೆಗೆ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಲು ಒಪ್ಪಿದ್ದಾರೆ.

ADVERTISEMENT

ಕ್ರಿಯಾ ಸಮಿತಿ ಮನವಿ: ನಗರದ ಕಾಲೇಜು ವಿದ್ಯಾರ್ಥಿಗಳು ನಾಳೆ 12 ಗಂಟೆಗೆ ವಿಶ್ವವಿದ್ಯಾನಿಲಯದ ಕಚೇರಿ ಆವರಣದಲ್ಲಿ ಶಾಂತಿಯುತವಾಗಿ ಬಂದು ಸೇರಿ ಅಹಿಂಸಾವರ್ತಿಗಳಾಗಿ ಸಹಕರಿಸಿ ಸಚಿವರು ಹೇಳುವುದನ್ನು ಕೇಳಬೇಕೆಂದು ವಿದ್ಯಾರ್ಥಿ ಕ್ರಿಯಾ ಸಮಿತಿ ಕೋರಿದೆ.

‘ಸಂಶಯ, ತಪ್ಪು ತಿಳಿವಳಿಕೆ’ಗಳ ನಿವಾರಣೆಗೆ ಇಂದಿರಾ –ಎಸ್ಸೆನ್ ಚರ್ಚೆ

ನವದೆಹಲಿ, ಸೆ. 8– ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾದ ‘ಸಂಶಯಗಳ ಮತ್ತು ತಪ್ಪು ತಿಳುವಳಿಕೆಗಳ’ ನಿವಾರಣೆಗಾಗಿ ಇಂದು ಇಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಮತ್ತು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ನಡುವೆ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಯಿತು.

ಪ್ರಧಾನಿಯವರ ನಿವಾಸದಲ್ಲಿ ನಡೆದ ಈ ಭೇಟಿಯನ್ನು ‘ತುಂಬಾ ಸ್ನೇಹ ಪೂರ್ಣ ಹಾಗೂ ಹಾರ್ದಿಕ’ ಎಂದು ಬಣ್ಣಿಸಿದ ಶ್ರೀ ನಿಜಲಿಂಗಪ್ಪನವರು, ‘ಇದು ಕೇವಲ ಪೂರ್ವಭಾವಿ ಮಾತುಕತೆ ನಾವಿನ್ನೂ ಯಾವುದೇ ನಿರ್ದಿಷ್ಟ, ಗಾಢ ಚರ್ಚೆಗೆ ಬಂದಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪದೇ ಪದೇ ಸಮಾಲೋಚನೆಗಳನ್ನು ನಡೆಸುವ ಅಗತ್ಯದ ಬಗ್ಗೆ ತಾವು ಮತ್ತು ಶ್ರೀಮತಿ ಗಾಂಧಿ ಅವರು ಒಪ್ಪಿಕೊಂಡಿರುವುದಾಗಿಯೂ, ಎರಡನೇ ಸುತ್ತಿನ ಮಾತುಕತೆಗಳು ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ನಡೆಯಬಹುದೆಂದೂ ಅವರು ಹೇಳಿದರು.

ಆರೋಪಸಾಬೀತಾಗದೆ ನಗರ ವಾರ್ಸಿಟಿ ರಿಜಿಸ್ಟ್ರಾರ್ ವಿರುದ್ಧ ಕ್ರಮ ಅಸಾಧ್ಯ

ಬೆಂಗಳೂರು, ಸೆ. 8– ಅವರ ಮೇಲೆ ಹೊರೆಸಿರುವ ಆಪಾದನೆಗಳು ರುಜುವಾತು ಆಗದ ಹೊರತು ಬೆಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅವರನ್ನು ತೆಗೆಯಲು ಸಾಧ್ಯವಿಲ್ಲವೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.