ವೀರಪ್ಪನ್ ಬೇಡಿಕೆ: ಉಭಯ ಸರ್ಕಾರಗಳ ಉತ್ತಮ ಸ್ಪಂದನ
ಬೆಂಗಳೂರು, ಆಗಸ್ಟ್ 6– ‘ಡಾ. ರಾಜ್ ಕುಮಾರ್ ಬಿಡುಗಡೆಯೇ ನಮ್ಮ ಮುಖ್ಯ ಗುರಿ. ಈ ಹಿನ್ನೆಲೆಯಲ್ಲಿ ನರಹಂತಕ ವೀರಪ್ಪನ್ ಸರ್ಕಾರದ ಮುಂದಿಟ್ಟಿರುವ ಎಲ್ಲಾ 10 ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಿದೆ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಜತೆ ಚೆನ್ನೈನಲ್ಲಿ ಸುಮಾರು ಮೂರು ಗಂಟೆ ನಡೆದ ಸುದೀರ್ಘ ಮಾತುಕತೆಯ ನಂತರ ನಗರಕ್ಕೆ ಆಗಮಿಸಿದ ಕೃಷ್ಣ ಅವರು, ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ತಮಿಳು ಉಗ್ರಗಾಮಿಗಳ ಕೈವಾಡ ಶಂಕೆ
ಚೆನ್ನೈ, ಆಗಸ್ಟ್ 6– ಕನ್ನಡದ ಚಿತ್ರನಟ ರಾಜ್‌ಕುಮಾರ್ ಮತ್ತು ಇತರ ಮೂವರ ಬಿಡುಗಡೆಗಾಗಿ ವೀರಪ್ಪನ್ ಮುಂದಿಟ್ಟಿರುವ ರಾಜಕೀಯ ಬೇಡಿಕೆಗಳು ತಮಿಳುನಾಡು ಉಗ್ರಗಾಮಿ ಗುಂಪೊಂದರ ಜತೆಗೂಡಿ ರಚಿಸಲಾಗಿದೆ ಎಂಬ ಊಹಾಪೋಹ ಬಲವಾಗಿದೆ.
ಇಂದು ಇಲ್ಲಿ ಈ ಬಗ್ಗೆ ಪತ್ರಕರ್ತರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಪ್ರಶ್ನಿಸಿದಾಗ, ‘ಇದು ನಿಜವೂ ಇರಬಹುದು ಅಥವಾ ಸ್ವತಃ ವೀರಪ್ಪನ್‌ನೇ ತಮಿಳು ಉಗ್ರಗಾಮಿಯಾಗಿಯೂ ಇರಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.