ADVERTISEMENT

ಅದ್ಧೂರಿ ಸಮಾರಂಭಕ್ಕೆ ಎಷ್ಟು ಕೋಟಿ?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2011, 19:30 IST
Last Updated 10 ಏಪ್ರಿಲ್ 2011, 19:30 IST

‘ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಬಿ.ಡಿ.ಎ. ನಿವೇಶನದ ಬದಲಿಗೆ ತಂಡದ ಎಲ್ಲಾ ಆಟಗಾರರನ್ನು ನಗರಕ್ಕೆ ಬರಮಾಡಿಕೊಂಡು ಅದ್ದೂರಿಯಾಗಿ ಸನ್ಮಾನಿಸಿ 25 ಲಕ್ಷ ರೂ. ನಗದು ಪುರಸ್ಕಾರವನ್ನು ಪ್ರತಿಯೊಬ್ಬರಿಗೂ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ (ಪ್ರ.ವಾ. 8.4.11).

ಭಾರತ ತಂಡ ವಿಶ್ವಕಪ್ ಗೆದ್ದ ಬೆನ್ನಲ್ಲೇ ತರಾತುರಿಯಲ್ಲಿ ಬಿ.ಡಿ.ಎ. ಸೈಟ್‌ಗಳನ್ನು ಮುಖ್ಯಮಂತ್ರಿಘೋಷಿಸಿದ್ದು ಸಾಕಷ್ಟು ಟೀಕೆಗಳಿಗೆ ಗ್ರಾಸವಾಗಿತ್ತು. ಮುಖ್ಯಮಂತ್ರಿಯವರ ಕಾನೂನು ಮತ್ತು ಆಡಳಿತಾತ್ಮಕ ತಿಳುವಳಿಕೆಯ ಮಟ್ಟ ಮತ್ತು ಏಕಪಕ್ಷೀಯ ನಿರ್ಧಾರಗಳಿಂದ ಆಗುತ್ತಿರುವ ಅಚಾತುರ್ಯ ನೋಡಿ ನಗಬೇಕೋ ಅಳಬೇಕೋ  ತಿಳಿಯದು!

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರಾಜ್ಯವನ್ನು ಪ್ರತಿನಿಧಿಸಿದ ಇಬ್ಬರು ಆಟಗಾರರಿಗೆ ತಲಾ ಎರಡು ಲಕ್ಷ ರೂ. ಒಳಗೊಂಡ ಏಕಲವ್ಯ ಪ್ರಶಸ್ತಿಯನ್ನು ಪ್ರಕಟಿಸಿದರೆ, ಇಲ್ಲಿ  ಕರ್ನಾಟಕದವರಿಲ್ಲದ ನಮ್ಮ ಭಾರತೀಯ ತಂಡದ ಆಟಗಾರರಿಗೆ 25 ಲಕ್ಷ ರೂ. ಬಹುಮಾನ ಕೊಡುತ್ತಿರುವುದು ಮುಖ್ಯಮಂತ್ರಿಗಳ ವಿವೇಚನಾರಹಿತ, ನಿರ್ಧಾರವಲ್ಲದೆ ಬೇರೇನೂ ಅಲ್ಲ.

ADVERTISEMENT

 ನಮ್ಮಲ್ಲಿಯೇ ಇರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ ಶೂ ಕೊಂಡುಕೊಳ್ಳಲು ಹಣವಿಲ್ಲದ ಸ್ಥಿತಿ ಇದೆ. ಹೀಗಿರುವಾಗ ಕೋಟಿ ಕೋಟಿ ಹಣದ ಹೊಳೆಯಲ್ಲಿ ತೇಲುತ್ತಿರುವವರಿಗೆ ಅದ್ಧೂರಿ ಸನ್ಮಾನ ಸಮಾರಂಭ! ಅದ್ಧೂರಿ ಸಮಾರಂಭ ಎಂದರೆ ಅದು ಕೋಟಿಗಳ ಲೆಕ್ಕದಲ್ಲೇ ತಾನೆ? ಈ ಕೋಟಿ ಕೋಟಿ ಹಣ ಜನರ ತೆರಿಗೆಯದ್ದು. ಇದರಿಂದ ಯಡಿಯೂರಪ್ಪನವರು ಸ್ವತಃ ಕಳೆದುಕೊಳ್ಳುವುದೇನೂ ಇಲ್ಲ? ಇದೇ ನಮ್ಮ ದುರಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.