ADVERTISEMENT

ಅಪರಿಪೂರ್ಣ ತೀರ್ಪು

ಜಿನದತ್ತ ದೇಸಾಯಿ, ಬೆಳಗಾವಿ
Published 8 ಮೇ 2014, 19:30 IST
Last Updated 8 ಮೇ 2014, 19:30 IST

ಕಲಿಕಾ ಮಾಧ್ಯಮ ಕುರಿತ ತೀರ್ಪು, ರಾಜ್ಯ ಪುನರ್ವಿಂಗಡನೆಯ  ಧ್ಯೇಯೋದ್ದೇಶ­ಗಳನ್ನು ಗಾಳಿಗೆ ತೂರಿದೆ. ಈ ನಾಡಿನ ಸಂಸ್ಕೃತಿ, ಪರಂಪರೆ, ಸ್ವಂತಿಕೆ­ಗಳ ಮೇಲೆ ಆಗುವ ಗಂಭೀರ ಪರಿಣಾ­ಮ­ಗಳನ್ನು ತೀರ್ಪು ಅಲಕ್ಷಿಸಿದೆಯಲ್ಲದೆ, ಇದು ಮಗುವಿನ ಸಹಜ ಸೃಜನಾತ್ಮಕತೆಯನ್ನು ಅಳಿಸಿ­ಹಾಕುತ್ತದೆ ಎನ್ನುವುದನ್ನು ತೀರ್ಪು ಕಡೆಗಣಿಸಿದೆ.

ಶಿಕ್ಷಣ ತಜ್ಞರನ್ನು ಹೊರಗಿಟ್ಟು, ಕೇವಲ ಕಾನೂನು ತಜ್ಞರು ಹೊರತಂದ ಅವೈಜ್ಞಾನಿಕ ಮತ್ತು ಅಪರಿಪೂರ್ಣ ತೀರ್ಪು ಇದು. ತೀರ್ಪಿತ್ತ ನ್ಯಾಯ­ಮೂರ್ತಿಗಳೇ ಆಗಲಿ, ಅವರೆದುರು ವಿಷಯ­­ ಮಂಡಿಸಿದ ವಕೀಲರೇ ಆಗಲಿ ಶಿಕ್ಷಣ ತಜ್ಞ­ರಲ್ಲ. ಇಂದಿನ ಮತ್ತು ಮುಂದಿನ ಮಕ್ಕಳ ಶೈಕ್ಷಣಿಕ ಭವಿಷ್ಯ­ವನ್ನು ನಿರ್ಧರಿಸುವ ಇಂಥ ವಿಷಯ­ಗಳಲ್ಲಿ ಜವಾ­ಬ್ದಾರಿ ಶಿಕ್ಷಣ ತಜ್ಞರ ಅಭಿ­ಪ್ರಾಯ­ಕ್ಕೆ ಮನ್ನಣೆ ಸಿಕ್ಕಬೇಕು. ಆದ್ದರಿಂದ, ದೇಶದ ಶಿಕ್ಷಣ ತಜ್ಞರ ಒಂದು ತಂಡವನ್ನು ರಚಿಸಿ, ಅವರ ಅಭಿಪ್ರಾಯಗಳನ್ನು ಪಡೆದು, ಆ ನಂತರ ತಮ್ಮ ತೀರ್ಪನ್ನು ನೀಡುವಂತೆ ಕೋರುವ ಒಂದು ಮಧ್ಯಂ­ತರ ಅರ್ಜಿಯನ್ನು ಪುನರ್‌ ಪರಿಶೀಲನಾ ಅರ್ಜಿಯೊಂದಿಗೆ ಸಲ್ಲಿಸಬೇಕು.

ತಮಗೆ ಸ್ವತಃ ಗೊತ್ತಿಲ್ಲದ ಇಂಥ ಎಷ್ಟೋ ತಾಂತ್ರಿಕ ಹಾಗೂ ವೈಜ್ಞಾನಿಕ ವಿಷಯಗಳಲ್ಲಿ ನ್ಯಾಯಾ­­ಲಯಗಳು ತಜ್ಞರ ಅಭಿಪ್ರಾಯವನ್ನು ಪಡೆದು ಅದನ್ನು ಪರಿಗಣಿಸಿ, ಕೊನೆಗೆ ತಮ್ಮ ತೀರ್ಪು ಕೊಟ್ಟದ್ದುಂಟು. ಕಾನೂನಿನಲ್ಲಿ ಇಂಥ ಅವ­ಕಾಶ­ವಿದೆ. ‘ಎಲ್ಲ ಬಲ್ಲವರಿಲ್ಲ’ ಎನ್ನುವ ಸರ್ವಜ್ಞನ ಮಾತಿನ ಸತ್ಯತೆಯನ್ನು ನ್ಯಾಯ­ಮೂರ್ತಿಗಳೂ ಅರ್ಥ ಮಾಡಿಕೊಳ್ಳಬೇಕು.

ಕಾನೂನು ತಜ್ಞರ ಅಭಿಪ್ರಾಯ ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯ ಭಿನ್ನವಾದರೆ, ಯಾರ ಅಭಿ­ಪ್ರಾಯಕ್ಕೆ ಮನ್ನಣೆ ಸಿಗಬೇಕೆನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದು ಕಷ್ಟದ್ದೇನಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯವನ್ನೇ ಒಪ್ಪಿಕೊಳ್ಳ­ಬೇಕಾ­­ಗುತ್ತದೆ. ಆ ಅಭಿಪ್ರಾಯವನ್ನು ಈಗಿರುವ ಸಂವಿ­ಧಾನದ ಚೌಕಟ್ಟಿನಲ್ಲಿ ಅಳವಡಿಸುವುದು ಸಾಧ್ಯವೇ ಎಂದು ಕಾನೂನು ತಜ್ಞರು ಆಲೋಚಿಸ­ಬೇಕು. ಅದು ಸಾಧ್ಯವೇ ಇಲ್ಲಾ ಎಂದಾದರೆ ಚೌಕ­ಟ್ಟನ್ನು ಬಗ್ಗಿಸಬೇಕು ಇಲ್ಲವೇ ಹಿಗ್ಗಿಸಬೇಕು. ಸಂವಿ­ಧಾನವು ನಮಗಾಗಿ ಇದೆ. ನಾವು ಸಂವಿಧಾನಕ್ಕಾಗಿ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.