ADVERTISEMENT

ಅಭಿವೃದ್ಧಿಯ ಮಾನದಂಡವೇನು?

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಇತ್ತೀಚೆಗೆ ನಾವು ಸಂಸಾರ ಸಮೇತ ಮಂತ್ರಾಲಯಕ್ಕೆ ಹೋಗಿದ್ದೆವು. ಅಲ್ಲಿಗೆ ಹೋದವರೆಲ್ಲಾ ಗುರು ರಾಘವೇಂದ್ರರು ತಪಗೈದ ಸ್ಥಳವೆಂದು ನಂಬಲಾಗಿರುವ ಪಂಚಮುಖಿ ಆಂಜನೇಯನ ದರ್ಶನಕ್ಕೆ ತೆರಳುವುದು ವಾಡಿಕೆ.
 
ಅದರಂತೆಯೇ ನಾವು ಕೂಡ ತೆರಳಿದೆವು. ಪಂಚಮುಖಿ ಆಂಜನೇಯನ ದೇವಸ್ಥಾನವಿರುವುದು ಕರ್ನಾಟಕದಲ್ಲಿ, ಮಂತ್ರಾಲಯವಿರುವುದು ಆಂಧ್ರದಲ್ಲಿ. ಯಾವುದೇ ಉತ್ತರ ಕರ್ನಾಟಕದ ಹಳ್ಳಿಗಳಂತೆ ಅಲ್ಲಿಯೂ ಸಹಾ ಮೂಲಸೌಕರ್ಯ, ನೈರ್ಮಲ್ಯ ಇತ್ಯಾದಿಗಳನ್ನು ಹುಡುಕಿದರೂ ಸಿಗುವುದಿಲ್ಲ. ತುಂಗೆಯು ಪಕ್ಕದಲ್ಲಿಯೇ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ತತ್ವಾರ. 

ಚೀನಾ ಸರ್ಕಾರವು ಸಮುದ್ರದ ಮೇಲೆ ನೂರಾರು ಕಿಲೋಮೀಟರ್ ಸೇತುವೆಯನ್ನು ಎರಡು ವರ್ಷಗಳಲ್ಲಿ ಕಟ್ಟಿ ಮುಗಿಸುತ್ತದೆ ಆದರೆ ನಮ್ಮ ಘನ ಸರ್ಕಾರಕ್ಕೆ ತುಂಗಾ ನದಿಯ ಮೇಲೆ ಸೇತುವೆಯನ್ನು ಕಟ್ಟಿ ಮುಗಿಸಲು ವರ್ಷಗಳೇ ಕಳೆದರೂ ಸಹಾ ಸಾಧ್ಯವಾಗಿಲ್ಲ.

ಇನ್ನು ನಮ್ಮ ಜೀವವನ್ನು ತ್ರಿಚಕ್ರವಾಹನದ ಚಾಲಕನ ಕೈಯಲ್ಲಿ ಕೊಟ್ಟು ನೀರಿಲ್ಲದ ನದಿಯನ್ನು ದಾಟಿದರೂ ರಸ್ತೆಯೆಂಬ ವಸ್ತುವನ್ನು ಹುಡುಕಬೇಕು. ಯಾವ ಸಡಕ್ ಯೋಜನೆಯೂ ಅಲ್ಲಿಗೆ ಬಂದಂತಿಲ್ಲ. ನದಿಯನ್ನು ದಾಟಿದ ಕೂಡಲೇ ಕರ್ನಾಟಕದ ಗಡಿಯ ಗ್ರಾಮ `ರಾಮರಾವ್ ಕ್ಯಾಂಪ್~ ಮತ್ತು ಕರ್ನಾಟಕ ರಾಜ್ಯಕ್ಕೆ ಸುಸ್ವಾಗತವೆಂಬ ಫಲಕವೂ ಕಾಣಸಿಗುತ್ತದೆ. ಇಲ್ಲಿಯೇ ಅಸಲಿ ರಾಕ್ಷಸ ದರ್ಶನವೂ ಆಗುತ್ತದೆ.

ಇಲ್ಲಿ ಕರ್ನಾಟಕ ಪೊಲೀಸರು ಒಂದು ಗಡಿ ಠಾಣೆಯನ್ನು ಹಾಕಿಕೊಂಡು ಕೂತಿದ್ದಾರೆ. ಆಂಧ್ರ ಪರ್ಮಿಟ್ ಹೊಂದಿರುವ ಆಟೋಗಳನ್ನು ತಡೆದು ಪ್ರತೀ ಆಟೋಕ್ಕೆ ರೂ. 20/-ನ್ನು ವಸೂಲು ಮಾಡುತ್ತಾರೆ, ಇದಕ್ಕೆ ಯಾವ ರಸೀತಿಯೂ ಇರುವುದಿಲ್ಲ. ಇದಲ್ಲದೆ ತಿಂಗಳಿಗೆ ರೂ. 100/- ಪ್ರತ್ಯೇಕವಾಗಿ ಬೇರೆ ಕೊಡಬೇಕಂತೆ.
 
ನಾನು ಚಾಲಕನನ್ನು ಈ ರೀತಿ ಯಾಕೆ ಇವರಿಗೆ ಕೊಡುತ್ತೀರಿ, ರಾಯಚೂರು ಜಿಲ್ಲೆಯ ಪರ್ಮಿಟ್ ಕೂಡಾ ತೆಗೆದುಕೊಳ್ಳಬಾರದೇ ಎಂದು ಕೇಳಿದ್ದಕ್ಕೆ ಆತನೆಂದ ತ್ರಿಚಕ್ರ ವಾಹನಕ್ಕೆ ಬೇರೊಂದು ರಾಜ್ಯದ ಪರ್ಮಿಟ್ ಕೊಡುವುದಿಲ್ಲವಂತೆ.

ಆಂಧ್ರದಲ್ಲಿ ವರ್ಷಕ್ಕೆ ರೂ. 450/- ಪರ್ಮಿಟ್ ಶುಲ್ಕ, ಕರ್ನಾಟಕದ ಪೊಲೀಸರಿಗೆ ತಿಂಗಳಿಗೆ ಸುಮಾರು ರೂ. 900/- ಕೊಡಬೇಕೆಂದ. ಇದಕ್ಕಿಂತ ದಾರುಣವಾದದ್ದೆಂದರೆ, ಬೆಲೆ ಹೆಚ್ಚಾಗಿದೆಯೆಂದು ರಿಕ್ಷಾದವರು ಬಾಡಿಗೆಯನ್ನು ಹೆಚ್ಚಿಸಿಕೊಂಡರೆ, ಪೊಲೀಸರು ಕೂಡಾ ರೂ. 20/- ರಿಂದ ರೂ. 30/- ಮಾಡಿದರಂತೆ. ಯಾವ ಸರ್ಕಾರಕ್ಕೂ ಹೊಟ್ಟೆಪಾಡಿಗಾಗಿ ಓಡಿಸುವ ಆಟೋಗಳಿಗೆ ಇಷ್ಟು ದೂರಕ್ಕೆ ಅಂತರರಾಜ್ಯವೆಂದು ಪರಿಗಣಿಸಬಾರದೆಂದು ಅನ್ನಿಸಿಲ್ಲ.

ಆ ಕಡೆ ಆಂಧ್ರದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರೆ, ಈ ಕಡೆ ಇಂತಹ ಶಾಸಕರ ಯೋಜನೆಯಲ್ಲಿ ನಿರ್ಮಿತವಾದದ್ದು ಎಂದು ಫಲಕಗಳು. ಎರಡೂ ಬೇರೆ ಬೇರೆ ಪಕ್ಷಗಳ ಸರ್ಕಾರಗಳು, ಎರಡರ ಘೋಷಣೆಯೂ `ಅಭಿವೃದ್ಧಿಯೇ~ ಆದರೆ ಯಾರ ಅಭಿವೃದ್ಧಿ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.