ADVERTISEMENT

ಅಮಲುದಾರರಿಗೆ ಹಾಕಿ ದಂಡ

ಡಾ.ಎಚ್.ಚಂದ್ರಶೇಖರ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST

ಭಾರತದ ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂದೆಲ್ಲ ಖ್ಯಾತಿ ಹೊತ್ತು ಮೆರೆಯುತ್ತಿರುವ ಬೆಂಗಳೂರಿನಲ್ಲಿ ಕುಡುಕರ ಸಂಖ್ಯೆಯೂ ಹೆಚ್ಚು.
 
ಕ್ಲಬ್, ಐಷಾರಾಮಿ ಹೊಟೆಲ್, ಪಬ್, ಬಾರ್ ಅಂಡ್ ರೆಸ್ಟೊರೆಂಟ್, ನಗರದ ಹೊರವಲಯದಲ್ಲಿ ರೆಸಾರ್ಟ್‌ಗಳಲ್ಲಿ ಸಿರಿವಂತರು ಮೋಜಿಗಾಗಿ ಮದ್ಯ ಹೀರುತ್ತಾರೆ. ಇವರಲ್ಲಿ ಪುರುಷರು, ಮಹಿಳೆಯರು ಎಂಬ ಭೇದವಿಲ್ಲ. ಕುಡಿದು ವಾಹನ ಓಡಿಸುವಾಗ ಒಮ್ಮಮ್ಮೆ ಗಲಾಟೆ ಮಾಡುತ್ತಾರೆ ಎಂಬುದು ಬಿಟ್ಟರೆ ಇವರಿಂದ ಬೇರೆ ಯಾವ ತೊಂದರೆಯಿಲ್ಲ.

ಸಮಸ್ಯೆ ಇರುವುದು ಶ್ರಮಿಕ ಮತ್ತು ಮಧ್ಯಮ ವರ್ಗದವರಲ್ಲಿ. ಇವರಲ್ಲಿ ಕೆಲವರು ತಮ್ಮ ಹಣಕಾಸಿನ ಪರಿಸ್ಥಿತಿಯನ್ನೂ ಮರೆತು ದುಡಿದದ್ದೆಲ್ಲವನ್ನೂ ಬಾರ್‌ಗೆ ಸುರಿಯುತ್ತಾರೆ. ಮದ್ಯಕ್ಕೆ ದಾಸರಾಗಿ ಅಳತೆ ಮೀರಿ ಕುಡಿಯುತ್ತಾರೆ. ಇದಕ್ಕೆ ಹಗಲು, ರಾತ್ರಿಯ ವ್ಯತ್ಯಾಸವೂ ಇರುವುದಿಲ್ಲ. ಪರಮಾತ್ಮ ಒಳಗೆ ಸೇರಿದ ಮೇಲೆ ಅವರಿಗೆ ತಮ್ಮ ಸ್ಥಾನಮಾನ ಮರೆತುಹೋಗುತ್ತದೆ.

ಅಮಲುದಾರರಾಗಿ ತೂರಾಡುತ್ತಾ ರಸ್ತೆಯ ಬದಿಗೋ, ಉದ್ಯಾನವೋ, ಮೋರಿಯ ಪಕ್ಕವೋ ಕುಸಿದು ಮಲಗುತ್ತಾರೆ. ಇದರಿಂದ ನೋಡುವವರಿಗೂ ಕಿರಿಕಿರಿ. ಅವರ ಕುಟುಂಬ ವರ್ಗದವರಿಗೂ ತೊಂದರೆ.

ಕುಡಿದು ರಸ್ತೆಯಲ್ಲಿ ಮಲಗುವವರಿಗೆ ದಂಡ ವಿಧಿಸಲು ಪೊಲೀಸ್ ಇಲಾಖೆ ಮುಂದಾಗಬೇಕು. ಆಗ ಇಂತಹ ದೃಶ್ಯಗಳು ಕಡಿಮೆಯಾದಾವು.  ನಗರ ಪೊಲೀಸ್ ಆಯುಕ್ತರು ಈ ಬಗ್ಗೆ ಆಲೋಚಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.