ADVERTISEMENT

ಅಸಮರ್ಪಕ ಅಡುಗೆ ಇಂಧನ ವಿತರಣೆ; ಯಾರು ಹೊಣೆ?

ಹೇಮಾ ತುಂಗಾನಗರ
Published 21 ಅಕ್ಟೋಬರ್ 2013, 19:30 IST
Last Updated 21 ಅಕ್ಟೋಬರ್ 2013, 19:30 IST
ಅಸಮರ್ಪಕ ಅಡುಗೆ ಇಂಧನ ವಿತರಣೆ; ಯಾರು ಹೊಣೆ?
ಅಸಮರ್ಪಕ ಅಡುಗೆ ಇಂಧನ ವಿತರಣೆ; ಯಾರು ಹೊಣೆ?   

ನಗರದಲ್ಲಿ ಕೆಲವು ಅಡುಗೆ ಇಂಧನ ಪೂರೈಕೆದಾರರನ್ನು ಹೇಳುವವರಿಲ್ಲ. ಮೊಬೈಲ್‌ನಲ್ಲಿ 24 ಗಂಟೆಗಳ ಬುಕಿಂಗ್‌ ವ್ಯವಸ್ಥೆ ಬಂದ ನಂತರ ಬುಕಿಂಗ್‌ ವ್ಯವಸ್ಥೆಯೇನೋ  ಸುಲಭವಾಗಿದೆ. ಆದರೆ ಇಲ್ಲೂ ಅವ್ಯವಹಾರ ನಡೆಯುತ್ತಿದೆಯೇ ಎಂಬ ಗುಮಾನಿ ಬರುವಂತಿದೆ. ಗ್ಯಾಸ್‌ ಬುಕ್‌ ಮಾಡಿ ಇಪ್ಪತ್ತು ದಿನಗಳಾದರೂ ವಿತರಣೆಯಾಗುತ್ತಿಲ್ಲ. ವಿಚಾರಿಸಿದರೆ ಬುಕಿಂಗ್‌ ಆಗಿಲ್ಲ ಎನ್ನುತ್ತಾರೆ.

ಹಬ್ಬದ ಸಂದರ್ಭದಲ್ಲಿ ಗ್ಯಾಸ್‌ ಬಳಕೆದಾರರು ಕರೆ ಮಾಡಿದರೆ ಸ್ವೀಕರಿಸುವವರಿಲ್ಲ. ‘ಹುಡುಗರು ಟ್ರಿಪ್‌ ಹೋಗಿದ್ದಾರೆ. ಹಾಗಾಗಿ ಪೂರೈಕೆ ಮಾಡಿಲ್ಲ. ನೀವೇ ಕೊಂಡು ಹೋಗಿ’ ಅಂತಾರೆ. ಕಡೇ ಪಕ್ಷ ಗ್ರಾಹಕರ ಕರೆಯನ್ನೂ ಸ್ವೀಕರಿಸುವುದಿಲ್ಲ. ಏಜೆನ್ಸಿಯಿಂದ ಹತ್ತಿಪ್ಪತ್ತು ಕಿಲೋಮೀಟರ್‌ ದೂರ ವಾಸವಿರುವವರು ಏಜೆನ್ಸಿ ಕಚೇರಿಗೆ ಬಂದು ವಿಚಾರಿಸಿಕೊಂಡು ಬರಿಗೈಲಿ ಹೋಗಬೇಕಾದ ಪರಿಸ್ಥಿತಿ ಇದೆ.

ಇದು ವಿಜಯನಗರದ ಕಲ್ಪನ ಇಂಡೇನ್‌ ಗ್ಯಾಸ್ ಏಜೆನ್ಸಿಯ ಗ್ರಾಹಕರ ಕತೆ.  ಗ್ರಾಹಕರು ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಏನಾದರೊಂದು ಗೊಂದಲದ ಹೇಳಿಕೆ ನೀಡುತ್ತಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಗ್ಯಾಸ್‌ ಬುಕ್‌ ಮಾಡಿ ಹದಿನೈದು ದಿನವಾದರೂ ಪೂರೈಕೆಯಾಗಿಲ್ಲ ಎಂದು ಏಜೆನ್ಸಿಗೆ ಹೋಗಿ ಕೇಳಿದರೆ, ಬುಕಿಂಗ್‌ ಆಗಿಲ್ಲ ಅಂತಾರೆ.

ಮತ್ತೆ ಹೊಸದಾಗಿ ಬುಕ್‌ ಮಾಡಿದರೆ ಇನ್ನೂ ಒಂದು ವಾರ ಕಾಯಬೇಕು ಅಂತಾರೆ. ಅಲ್ಲಿಗೆ ಬುಕ್‌ ಮಾಡಿ ಒಂದು ತಿಂಗಳು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಉತ್ತರಿಸುವವರು ಯಾರೂ ಇಲ್ಲ. ಸರಿಯಾಗಿ ಬುಕ್‌ ಮಾಡಿದರೂ ಆಗಿಲ್ಲ ಎಂದರೆ ಯಾರ ತಪ್ಪು ? ಗ್ಯಾಸ್‌ ಪೂರೈಕೆ ಮಾಡದ ಕಾರಣ ಇಂಡಕ್ಷನ್‌ ಸ್ಟೌ ಕೊಳ್ಳಬೇಕಾಯಿತು. ಗ್ಯಾಸ್ ಮುಗಿದು ಹತ್ತು ದಿನವಾಗಿದೆ.

ಇನ್ನೂ ಎಷ್ಟು ದಿನ ಕಾಯಬೇಕು ಎಂಬ ಖಾತ್ರಿಯೂ ಇಲ್ಲ. ನಗರಕ್ಕೆ ಅಡುಗೆ ಇಂಧನ  ಪೂರೈಕೆಯಲ್ಲಿ ವ್ಯತ್ಯಯವಾದ ಬಗ್ಗೆ ಮಾಹಿತಿ ಇಲ್ಲ. ಪೂರೈಕೆಯಲ್ಲಿನ ವ್ಯತ್ಯಯಕ್ಕಿಂತ ವಿತರಣೆಯಲ್ಲಿನ ಅವ್ಯವಸ್ಥೆಯೇ ಎದ್ದು ಕಾಣುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಡುಗೆ ಇಂಧನ ವಿತರಕರಿಗೆ ಸರಿಯಾದ ಸಮಯಕ್ಕೆ ಪೂರೈಕೆ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ವಿನಂತಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.