ADVERTISEMENT

ಆನೆಯ ದಂತ ಸುಡುವುದೇಕೆ?

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಮೈಸೂರಿನ ಅರಣ್ಯ ಭವನದಲ್ಲಿ ವಿವಿಧ ಕಾರಣಗಳಿಂದ ವಶಪಡಿಸಿಕೊಂಡ 9,443 ಕೆ.ಜಿ.ಯಷ್ಟು ಆನೆದಂತವನ್ನು ಸಂರಕ್ಷಿಸುವ ಸಮಸ್ಯೆಯಿಂದ ಪಾರಾಗಲು ಮತ್ತು ಕೇಂದ್ರ ಸರ್ಕಾರದ ನಿಯಮಕ್ಕೆ ಅನುಗುಣವಾಗಿ ಸುಡಬೇಕೆಂದು ಆಲೋಚಿಸುತ್ತಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. 

ವನ್ಯಪ್ರಾಣಿ ಹಂತಕರು ಮತ್ತು ಮಾನವ, ವನ್ಯಪ್ರಾಣಿಗಳ ಸಂಘರ್ಷದ ಮಧ್ಯೆ ಆನೆಗಳನ್ನು ಸಂರಕ್ಷಿಸುವುದು ಇಂದಿನ ದಿನಗಳಲ್ಲಿ ಕಷ್ಟಕರವಾಗಿದೆ. ಮುಂದಿನ ಪೀಳಿಗೆಗೆ ಆನೆಗಳ ದಂತಗಳಿರಲಿ, ಆನೆಗಳೇ ನೋಡಲು ಸಿಗುವುದು ದುಸ್ತರವಿದೆ. ಹೀಗಿರುವಾಗ ಅಪಾರ ಪ್ರಮಾಣದ, ಅತ್ಯಮೂಲ್ಯವಾದ ಆನೆದಂತಗಳನ್ನು ಸುಟ್ಟುಹಾಕಿದಲ್ಲಿ ಆನೆಗಳ ಜೀವ ಉಳಿಸುವ ವಿಚಾರದಲ್ಲಿ ಹೆಚ್ಚಿನ ಸಹಾಯವಾಗದು.

ಆನೆದಂತಗಳಿಗೆ ಭಾರತೀಯ ಸೇನೆಯಿಂದ ಬಹುಬೇಡಿಕೆ ಇದ್ದು, ಅದು ಪಾರಿತೋಷಕ ರೂಪದಲ್ಲಿ ದಂತಗಳನ್ನು ಸಂರಕ್ಷಿಸಿಡುತ್ತಿದೆ. ಈಗಾಗಲೇ ಭಾರತೀಯ ಸೇನೆಯ ಘಟಕಗಳಿಗೆ 15, 20 ಆನೆದಂತಗಳನ್ನು ನಿಯಮಾನುಸಾರವಾಗಿ ಹಸ್ತಾಂತರಿಸಿದ್ದು, ಅವು ಅಲ್ಲಿ ಸುರಕ್ಷಿತವಾಗಿವೆ ಎಂದು ರಾಜ್ಯ ಅರಣ್ಯ ಇಲಾಖೆ ಅಭಿಪ್ರಾಯಪಟ್ಟಿದೆ.

ಈಗಲಾದರೂ ಕೇಂದ್ರ ರಕ್ಷಣಾ ಇಲಾಖೆಯ ಮೂಲಕ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರೆ ದಂತಗಳನ್ನು ಸೇನಾ ಕಚೇರಿಗಳಿಗೆ ಹಸ್ತಾಂತರಿಸಲು ಕಾನೂನಿನ ಅಡ್ಡಿಯಿಲ್ಲವೆಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಯವರೇ ಹೇಳಿದ್ದಾರೆ. ಅರಣ್ಯ ಇಲಾಖೆಯು ಆತುರದಲ್ಲಿ ಆನೆದಂತಗಳನ್ನು ನಾಶಗೊಳಿಸುವ ಮೊದಲು ಅನ್ಯ ಮಾರ್ಗಗಳನ್ನು ಅರಸಿ, ಮುಂದಿನ ಪೀಳಿಗೆಯ ದೃಷ್ಟಿಯಿಂದಲಾದರೂ ಸಂರಕ್ಷಿಸುವ ಮನಸ್ಸು ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.