ADVERTISEMENT

ಆಯುರ್ವೇದ ಪದ್ಧತಿ ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 15:55 IST
Last Updated 21 ಫೆಬ್ರುವರಿ 2011, 15:55 IST

ಆಯುರ್ವೇದವನ್ನು ಶಂಕಿಸುವುದೇಕೆ? (ವಾ.ವಾ. 11)ಕ್ಕೆ ಓದುಗರೊಬ್ಬರ ಅಪಸ್ವರ (ವಾ.ವಾ.14) ಅರ್ಥಹೀನ. ಆಯುರ್ವೇದದ ಹಿರಿಮೆ ಹೇಳಿದಾಕ್ಷಣ ಉಳಿದುದು ಕನಿಷ್ಠವೆಂದಾಗುವುದಿಲ್ಲ.‘ಋಷಿಪ್ರಣೀತ’ ಎಂದುದು ಅಂಧ ಶ್ರದ್ಧೆಯಿಂದಲ್ಲ. ಸೂಕ್ಷ್ಮದರ್ಶಕವಿಲ್ಲದ ಆ ಕಾಲದಲ್ಲಿ ಋಷಿಗಳು ಕಣ್ಣಿಗೆ ಕಾಣದ ಅಣು ಜೀವಿಗಳ ಆಕಾರ, ಬಣ್ಣಗಳ ಬಗ್ಗೆಐದು ಸಾವಿರ ವರ್ಷಗಳ ಹಿಂದೆ ವರ್ಣಿಸಿದ ದಾಖಲೆ ಇಂದಿಗೂ ಲಭ್ಯ!  ರಕ್ತಪರಿಚಲನೆ ಯಕೃತ್ತಿನಿಂದಾಗುತ್ತದೆಂದು ಬಹುಕಾಲ ಆಧುನಿಕ ವೈದ್ಯಲೋಕ ತಿಳಿದಿತ್ತು.

ಆಯುರ್ವೇದವು ಹೃದಯದಿಂದಾಗುತ್ತದೆಂದರೂ ನಂಬಿರಲ್ಲಿಲ್ಲ. ನಂತರ ಸತ್ಯದ ಅರಿವಾಯಿತದಕ್ಕೆ. ರಸೌಷಧಿಗಳ ವಿಷಯದಲ್ಲಿ ಕೂಡಾ ಹೀಗೆಯೇ. ಶೋಧನ, ಮಾರಣಗಳಿಂದ ವಿಷರಹಿತ ಔಷಧ ಪರೀಕ್ಷೆ ವಾರಿತರ, (ನೀರಿನಲ್ಲಿ  ತೇಲುವುದು), ನಿರುತ್ಥ, ರೇಖಾಪೂರ್ಣತಾ... ಇತ್ಯಾದಿ ಹಲವು ಪರೀಕ್ಷೆಗಳಿವೆ. ಉದಾ: ಗಂಧಕ + ಪಾರದದಿಂದ ತಯಾರಾದ  ‘ಕಜ್ಜಲಿ’ ನೀರಿನಲ್ಲಿ ತೇಲುತ್ತದೆ. ಪಾರದದ ಸಾಪೇಕ್ಷ ಸಾಂದ್ರತೆ (specificgravity) 13.56 ನೀರಿನದು ಒಂದು. ಅಂದರೆ ಅಷ್ಟು ಭಾರವಾದದ್ದು ನೀರಿಗಿಂತ ಹಗುರಾಯಿತು.

 ಆ ಕಾಲದಲ್ಲಿ ಸಾಪೇಕ್ಷಸಾಂದ್ರತೆ ಎಂಬ ಶಬ್ದವಿರಲಿಲ್ಲ. ಆದರೆ ವಿಜ್ಞಾನವಿತ್ತು! ಆಧುನಿಕ ವಿಜ್ಞಾನ ಹೇಳುವುದು ಸಾರ್ವಕಾಲಿಕ ಸತ್ಯವಲ್ಲ. ಪರಮಾಣು ಅಭೇದ್ಯ ಎಂದು ಭಾವಿಸಿದ ಅದು ಎಲೆಕ್ಟ್ರಾನ್ ಕಂಡುಹಿಡಿದ ನಂತರ ಮೊದಲಿನ ನಂಬಿಕೆ ಹುಸಿಯಾಯಿತು. ಈ ರೀತಿಯ ಹಲವಾರು ಉದಾಹರಣೆಗಳಿವೆ. ಈ ಕಾಲ ವಿಶೇಷಕ್ಕನುಗುಣವಾಗಿ XPS, XRF ರೀತಿಯು ಅತ್ಯಾಧುನಿಕ ಸಾಧನಗಳಿಂದ ರಸೌಷಧಿಗಳ ವಿಷರಾಹಿತ್ಯವನ್ನು ಸಿದ್ಧಮಾಡಬಹುದು.
 
ವಿಷ ಶಾಸ್ತ್ರಕೆ ಸಂಬಂಧಪಟ್ಟ ಸಂಶೋಧನಾ ಕೇಂದ್ರ CSIR ಪ್ರಸಿದ್ಧ ರಸೌಷಧಗಳನ್ನು ನಿರಪಾಯಕಾರಿ ಎಂದು ಪ್ರಮಾಣೀಕರಿಸಿದೆ. ಇನ್ನು ವ್ಯಾಪಾರೀಕರಣ ಎಲ್ಲ ರಂಗಗಳಲ್ಲಿ ಇರುವಂತೆ ಆಯುರ್ವೇದವೂ ಹೊರತಲ್ಲ. ನಾನೂ ಅದನ್ನು ವಿರೋಧಿಸುತ್ತೇನೆ. ಆದರೆ ಆಯುರ್ವೇದವನ್ನೇ ಸಂಶಯಿಸುವವರನ್ನು ವಿಚಾರಶೂನ್ಯರೆನ್ನಬೇಕಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.