ADVERTISEMENT

ಆರೆಸೆಸ್ಸ್ ಬೆಂಬಲದಲ್ಲಿ ತಪ್ಪೇನಿದೆ?

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ವಿದೇಶಿ ಬ್ಯಾಂಕುಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ರಾಷ್ಟ್ರೀಯ ನಿಧಿ ಎಂದು ಘೋಷಿಸಬೇಕು, ಅದನ್ನು ಮರಳಿ ದೇಶಕ್ಕೆ ತರಬೇಕು, ಕಪ್ಪು ಹಣ ಇಟ್ಟಿರುವ ತೆರಿಗೆಗಳ್ಳರಿಗೆ ಉಗ್ರ ಶಿಕ್ಷೆಯಾಗಬೇಕು, ಈ ದೇಶದಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂದು ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಬಾಬಾ ರಾಮ್ ದೇವ್ ಇವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಸಂಪೂರ್ಣ ಬೆಂಬಲ ನೀಡಿರುವುದು ಕೇಂದ್ರ ಸರ್ಕಾರಕ್ಕೆ ಇರುಸುಮುರುಸಾಗಿರುವುದು ಏಕೆಂದು ತಿಳಿಯುತ್ತಿಲ್ಲ.

ಬಾಬಾರವರ ನಿರಶನಕ್ಕೆ ಆರೆಸೆಸ್ಸೆ ಬೆಂಬಲವಿದೆ ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂರವರು ವ್ಯಂಗ್ಯವಾಗಿ ಹೇಳಿರುವುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬಾಬಾರವರ ಈ ಜನಹಿತ ಕಾರ್ಯಕ್ಕೆ ಸಂಘಬೆಂಬಲಿಸುವುದರಲ್ಲಿ ತಪ್ಪೇನಿದೆ.


ರಾಷ್ಟ್ರಭಕ್ತರ ಸಂಘಟನೆಯಾದ, ಕಳೆದ 86 ವರ್ಷಗಳಿಂದ ಈ ದೇಶಕ್ಕಾಗಿ ದುಡಿಯುವ, ಮಿಡಿಯುವ ವ್ಯಕ್ತಿಗಳ ನಿರ್ಮಾಣದ ಕಾರ್ಯದಲ್ಲಿ ಆರೆಸೆಸ್ಸ್ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದೆ.
 
ಈ ದೇಶವನ್ನು ಪರಮ ವೈಭವದ ಸ್ಥಿತಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ, ಈ ದೇಶಕ್ಕೆ, ದೇಶವಾಸಿಗಳಿಗೆ ತೊಂದರೆಯಾದಾಗ ತನ್ನೆಲ್ಲ ಸ್ವಯಂಸೇವಕರೊಂದಿಗೆ ತಕ್ಷಣ ಸ್ಪಂದಿಸುವ ಸಂಘ ಹಾಲಿ ಭ್ರಷ್ಟಾಚಾರ ಮತ್ತು ವಿದೇಶಗಳಲ್ಲಿರುವ ಈ ದೇಶದ ಸಂಪತ್ತನ್ನು ಹಿಂದಕ್ಕೆ ಪಡೆಯುವ ಬಗ್ಗೆ ಅಣ್ಣ ಹಜಾರೇ ಮತ್ತು ರಾಮ್‌ದೇವ್‌ಜೀ ಅವರು ನಡೆಸುತ್ತಿರುವ ಸತ್ಯಾಗ್ರಹಕ್ಕೆ ಬೆಂಬಲ ನೀಡಿರುವುದು ತನ್ನ ಕರ್ತವ್ಯದ ಒಂದು ಭಾಗವಾಗಿದೆ.

ಇನ್ನಾದರೂ ಕಾಂಗ್ರೆಸ್ ನಾಯಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಲಕ್ಷಾಂತರ ಮಂದಿ ದೇಶಭಕ್ತರ ಭಾವನೆಗಳನ್ನು ನೋಯಿಸುವ ಅಥವಾ ಕೆರಳಿಸುವ ಕೆಲಸ ಮಾಡದೆ ತಮ್ಮ ಘನತೆಗೆ ತಕ್ಕಂತೆ ಹೇಳಿಕೆಗಳನ್ನು ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.