ADVERTISEMENT

ಇಲ್ಲಿ ಎಲ್ಲರೂ ಭ್ರಷ್ಟರೇ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 18:30 IST
Last Updated 7 ಫೆಬ್ರುವರಿ 2011, 18:30 IST

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಧಿಕಾರ ಎಲ್ಲಿ ಹೋಗಿ ಬಿಡುವುದೋ ಎಂಬ ಭೀತಿಯಿಂದ ಮಾಯ, ಮಾಟ, ಮಂತ್ರದ ಮಾತುಗಳನ್ನಾಡುತ್ತ ತೀರ್ಥಯಾತ್ರೆ, ಪೂಜೆ, ಪುನಸ್ಕಾರ ಗುರು ಪೂಜೆ, ಗುರು ವಂದನೆ, ಹೋಮ, ಹವನ, ತೊಡುವ ಬಟ್ಟೆಗಳನ್ನು ಬದಾಯಿಸುವುದು ಮುಂತಾದ್ದನ್ನು ಮಾಡುತ್ತಿರುವುದನ್ನು ನೋಡಿದರೆ ಅಳಬೇಕೋ ನಗಬೇಕೋ ತಿಳಿಯದು.

ಈ ಮಹಾಶಯರು ಚಿತ್ತಭ್ರಮೆಗೆ ಒಳಗಾದವರಂತೆ ಕಾಣುತ್ತದೆ. ಏನಾದರೂ ಆಗಲಿ ಹೇಗಾದರೂ ಆಗಲಿ ಐದುವರ್ಷ ಅಧಿಕಾರದಲ್ಲಿ ಇರಬೇಕೆಂಬುದೇ ಇವರ ಬೀಜ ಮಂತ್ರವಾಗಿದೆ. ಪ್ರತಿಯೊಬ್ಬರೂ ಅವರವರ ಕರ್ಮಫಲವನ್ನು ಅನುಭವಿಸಿಯೇ ತೀರಬೇಕು.

ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ದೇವರು ಕೂಡ ಏನೂ ಮಾಡಲಾರ. ದೇವರಲ್ಲಿ ನಾವು ಕೇಳಬೇಕಾದದ್ದು ಭಕ್ತಿ ಜ್ಞಾನ ವೈರಾಗ್ಯಗಳನ್ನು ಮಾತ್ರ.

ಕಾಂಗ್ರೆಸ್ ಮತ್ತು ಜನತಾ ದಳಗಳು ಕೂಡ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾರ್ಯಕ್ರಮವನ್ನು ರಚಿಸಿ ಜನರ ಮುಂದೆ ಇಡುವುದನ್ನು ಬಿಟ್ಟು ಬರಿ ಗದ್ದಲ ಗಲಭೆಗಳನ್ನು ಮಾಡುತ್ತಿದ್ದಾರೆ. ವಿಧಾನ ಸಭೆಯ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದರು. ಪಾದಯಾತ್ರೆಗಳ ಹೆಸರಿನಲ್ಲಿ ಕೇವಲ ಧೂಳೆಬ್ಬಿಸುವ ಕೆಲಸ ಮಾಡಿದರು.

ಈಗ ನಡೆಯುತ್ತಿರುವ ಅತ್ಯಾಚಾರ, ಅನ್ಯಾಯ, ಭ್ರಷ್ಟಾಚಾರ ಎಲ್ಲವನ್ನೂ ಜನ ಮಾಧ್ಯಮಗಳ ಮೂಲಕ ತಿಳಿದು ಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳು ದಿನದಿನವೂ ಹೆಚ್ಚುತ್ತಿರುವುದರಿಂದ ಜನ ತತ್ತರಿಸುತ್ತಿದ್ದಾರೆ. ನಿರುದ್ಯೊಗ ಬೆಳೆಯುತ್ತಿದೆ. ಇದಕ್ಕೆಲ್ಲಾ ಪರಿಹಾರ ಯಾರಲ್ಲೂ ಇಲ್ಲ. ಯಡಿಯೂರಪ್ಪನವರ ರಾಜೀನಾಮೆ ಪಡೆಯುವುದನ್ನು ತಮ್ಮ ಬೀಜಮಂತ್ರ ಮಾಡಿಕೊಂಡಿರುತ್ತಾರೆ.

ಜನತಾ ದಳದವರು ಕೊಲೆ, ಸುಲಿಗೆ, ದರೋಡೆ ಮುಂತಾದ 30 ಅಪರಾಧಗಳನ್ನು ಹೊತ್ತು ಜೈಲಿನಲ್ಲಿದ್ದವರನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಗೆಲ್ಲಿಸಿದರು.

ಭ್ರಷ್ಟಾಚಾರ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ರಾಜಕೀಯದಲ್ಲಿ ಎಲ್ಲರೂ ಭ್ರಷ್ಟರೆ ಎಂಬುದನ್ನು ಜನಸಾಮಾನ್ಯರು ತಿಳಿದು ಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.