ಪೂರ್ವ ಪ್ರಾಥಮಿಕ ಹಂತದಿಂದ ತೊಡಗಿ ಕನಿಷ್ಟಪಕ್ಷ ಹತ್ತನೆಯ ತರಗತಿಯ ವರೆಗಾದರೂ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುವುದು ಮಕ್ಕಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಸಾಧುವಾದುದೆನ್ನುವುದನ್ನು ಶಿಕ್ಷಣ ಕ್ಷೇತ್ರದಲ್ಲಿ ನಿಜವಾಗಿಯೂ ಆಸಕ್ತಿ ಇರುವ ಎಲ್ಲರೂ ಇದುವರೆಗೂ ಹೇಳಿ ಹೇಳಿ ಸಾಕಾಗಿ ಹೋಗಿದೆ.
ಆದರೆ ನಮ್ಮ ಆಡಳಿತಾರೂಢರು ಬುದ್ದಿಬಲ ಇಲ್ಲದ ದುರ್ಬಲರಾಗಿರುವುದರಿಂದ ಅಧಿಕಾರಿ ವರ್ಗವೇ ಸರ್ಕಾರದ ನೀತಿ-ನಿಲುವುಗಳನ್ನು ರೂಪಿಸುತ್ತಿದೆ. ಇದರಿಂದಾಗಿ ಜಗತ್ತಿನಾದ್ಯಂತ ಶಿಕ್ಷಣ ತಜ್ಞರು ಪ್ರತಿಪಾದಿಸುವ ಮಾತೃಭಾಷಾ ಮಾಧ್ಯಮದ ಶಿಕ್ಷಣವೆನ್ನುವುದು ನಮ್ಮಲ್ಲಿ ಮೂಲೆಗುಂಪಾಗಿದೆ.
ಈ ಹೀನಾಯ ಸ್ಥಿತಿಗೆ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಜ್ಯಾದ್ಯಂತ ಇರುವ ಇದರ ಘಟಕಗಳು ಕೂಡಾ ಕಾರಣ. ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ನಡೆಯಬೇಕು ಎಂದೇನಾದರೂ ಒತ್ತಾಯ ನಡೆದಿದ್ದರೆ, ಅದು ಕೇವಲ ನಗರಗಳ ಮಹಾತ್ಮಾಗಾಂಧಿ ಪ್ರತಿಮೆಯ ಕೆಳಗೆ ಕುಳಿತು ಕೆಲವು ಸಾಹಿತಿಗಳು ಮತ್ತಿತರ ಆಸಕ್ತರು ಘೋಷಣೆಗಳನ್ನು ಕೂಗಿ, ಹೆಚ್ಚೆಂದರೆ ಠರಾವುಗಳನ್ನು ಮಂಡಿಸಿ, ಮುಖ್ಯಮಂತ್ರಿಗೊ, ಶಿಕ್ಷಣ ಮಂತ್ರಿಗೊ ಅರ್ಪಿಸುವುದಕ್ಕಷ್ಟೇ ಸೀಮಿತವಾಗಿದೆ.
ಹಾಗಾದರೆ ಈಗ ಏನು ಮಾಡಬೇಕು? ಗೋಕಾಕ್ ಚಳವಳಿಯ ಮಾರ್ಗಾನುಸರಣೆ; ಕನ್ನಡ ಸಾಹಿತ್ಯ ಪರಿಷತ್ತು ಪರಿಷನ್ಮಂದಿರದಿಂದ ಹೊರಬಂದು ನೇತೃತ್ವ ವಹಿಸುವುದು; ಇನ್ನು ಮುಂದೆ ಆಂಗ್ಲಭಾಷಾ ಮಾಧ್ಯಮ ಶಾಲೆಗಳ ಸ್ಥಾಪನೆಗೆ ಅನುಮತಿ ನೀಡದಂತೆ ಒತ್ತಡ ಹೇರುವುದು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವ ಹುಂಬತನಕ್ಕೆ ತಡೆಯೊಡ್ಡುವುದು, ಇಂಗ್ಲಿಷನ್ನು ಒಂದು ಭಾಷೆಯಾಗಿ ಒಂದನೆಯ ತರಗತಿಯಿಂದಲೊ ಅಥವಾ ಮೂರನೆಯ ತರಗತಿಯಿಂದಲೊ ಅಚ್ಚುಕಟ್ಟಾಗಿ ಕಲಿಸುವುದು, ಸಾಧ್ಯವಾದರೆ ಪೋಷಕರ ಸಭೆಗಳನ್ನು ಏರ್ಪಡಿಸಿ ಅವರಿಗೆ ಸೂಕ್ತವಾಗಿ ತಿಳಿವಳಿಕೆ ನೀಡಿ ಅವರ ಮಕ್ಕಳು ಖಂಡಿತವಾಗಿಯೂ ಇಂಗ್ಲಿಷ್ ಭಾಷಾ ಕಲಿಕೆಯಿಂದ ವಂಚಿತರಾಗುವುದಿಲ್ಲವೆನ್ನುವುದನ್ನು ಮನದಟ್ಟು ಮಾಡಿಕೊಡುವುದು. ಮಾತುಗಳ ಕಾಲ ಮುಗಿದಿದೆ; ಏನಿದ್ದರೂ ಕಾರ್ಯಪ್ರವೃತ್ತರಾಗುವುದೊಂದೇ ಕನ್ನಡವನ್ನು ಉಳಿಸಲು ಈಗ ಉಳಿದಿರುವ ಮಾರ್ಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.