ADVERTISEMENT

ಎಚ್.ಎ.ಎಲ್. ನೌಕರರೊಂದಿಗೆ ರಾಹುಲ್ ಸಂವಾದ: ರಾಜಕೀಯ ಪ್ರಹಸನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 19:45 IST
Last Updated 21 ಅಕ್ಟೋಬರ್ 2018, 19:45 IST

ಈ ತಿಂಗಳ 13ರಂದು ಎಚ್.ಎ.ಎಲ್. ನೌಕರರೊಂದಿಗೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನಡೆಸಿದ ಸಂವಾದವು ಸಂಪೂರ್ಣ ಏಕಪಕ್ಷೀಯ, ನಿರರ್ಥಕ ಮತ್ತು ಪಕ್ಕಾ ಚುನಾವಣಾ ರಾಜಕೀಯ ಕಾರ್ಯಕ್ರಮ. ‘ಎಚ್.ಎ.ಎಲ್. ದುಃಸ್ಥಿತಿಗೆ ಈಗಿನ ಸರ್ಕಾರವೇ ಕಾರಣ’ ಎಂದು ಆಯ್ದ ಕೆಲವು ನಿವೃತ್ತ ಅಧಿಕಾರಿಗಳು ಒಂದೆಡೆ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ರಫೇಲ್ ವಿಮಾನಗಳ ಖರೀದಿಯಿಂದ ಸರ್ಕಾರವು ಎಚ್.ಎ.ಎಲ್.ನ ಸಾಮರ್ಥ್ಯ ವನ್ನು ಕಡೆಗಣಿಸಿದೆ, ಈ ಮೂಲಕ ಅದರ ಬೆನ್ನಿಗೆ ಚೂರಿ ಇರಿದಿದೆ ಎಂಬ ಹೇಳಿಕೆಯೂ ಹೊರಬಿದ್ದಿದೆ. ಈ ಹೇಳಿಕೆಗಳಲ್ಲಿ ಸತ್ಯಾಂಶ ಎಷ್ಟಿದೆ ಎಂಬುದರ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರಕ್ಷಣಾ ಸಾಮಗ್ರಿಗಳ ಬಗ್ಗೆ ಪರಿಣತಿ ಹೊಂದಿರುವವರ ಜತೆ ಚರ್ಚೆಯಾಗಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಪ್ರಶ್ನೆಯೂ ಅವರದೇ ಉತ್ತರವೂ ಅವರದೇ ಎನ್ನುವ ರೀತಿಯಲ್ಲಿ ತೀರ್ಮಾನಗಳು ಹೊರಬಿದ್ದವು.

ಹಾಗಾದರೆ ಎಚ್.ಎ.ಎಲ್‌ಗೆ ಈಗಿನ ಸರ್ಕಾರದಿಂದಲೇ ದುಃಸ್ಥಿತಿ ಒದಗಿದೆಯೇ? ಸುಮಾರು ಇಪ್ಪತ್ತು ವರ್ಷಗಳಿಂದ ಎಚ್.ಎ.ಎಲ್. ಅನ್ನು ಕಡೆಗಣಿಸಲಾಗಿದೆ ಎಂಬ ಅಭಿಪ್ರಾಯ ಇದೆ. ಇದು ನಿಜವೋ ಸುಳ್ಳೋ? ನಿಜವಾಗಿದ್ದರೆ ಇದಕ್ಕೆ ಕಾರಣವಾದ ಸರ್ಕಾರಗಳು ಯಾವುವು ಎಂಬುದಕ್ಕೆ ಸೂಕ್ತ ಉತ್ತರ ಬೇಕಾಗಿದೆ. ರಫೇಲ್‌ ವಿಮಾನ ಖರೀದಿ ಒಪ್ಪಂದದ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ ಮತ್ತು ಈ ಸಂಬಂಧ ಹಲವು ಪ್ರಶ್ನೆಗಳು ನ್ಯಾಯಾಲಯದ ಮುಂದಿವೆ. ಪರಿಸ್ಥಿತಿ ಹೀಗಿರುವಾಗ ರಾಹುಲ್ ಗಾಂಧಿ ಈ ಬಗ್ಗೆ ಜನಸಾಮಾನ್ಯರಿಗೆ ಅರೆಬರೆ ಮಾಹಿತಿ ನೀಡಿದರೆ, ಅವರನ್ನು ತಪ್ಪುದಾರಿಗೆ ಎಳೆದಂತೆ ಆಗುವುದಿಲ್ಲವೇ?

–ಡಾ. ಆರ್. ವಿಜಯಸಾರಥಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.