ADVERTISEMENT

ಎಚ್ಚರ...ಎಚ್ಚರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ತಂತ್ರ ಹೆಣೆಯುವ ಕೆಲಸದಲ್ಲಿ ತೊಡಗಿವೆ. ಪ್ರಸ್ತುತ ಕರ್ನಾಟಕದಲ್ಲಿ ಮೂರು ಪ್ರಮುಖ ಪಕ್ಷಗಳು ತಮ್ಮದೇ ಮತಬ್ಯಾಂಕ್‌ ಸೃಷ್ಟಿಸಿಕೊಂಡು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿವೆ.

ಒಂದೆಡೆ, ರಾಜಕೀಯ ಪಕ್ಷಗಳು ಜಾತಿವಾರು ಮತಬ್ಯಾಂಕ್‌ನ ಬಂಡವಾಳ ಹೂಡಿಕೆ ಮಾಡುತ್ತಿವೆ. ಮತ್ತೊಂದೆಡೆ, ಪಕ್ಷಗಳ ಹುನ್ನಾರ ಅರಿಯದ ಮತದಾರ ತನ್ನ ಪವಿತ್ರವಾದ ಮತವನ್ನು ವಿವೇಚನಾರಹಿತವಾಗಿ ಚಲಾಯಿಸಿ, ರಾಜ್ಯದ ಅಭಿವೃದ್ಧಿಗೆ ಬೇಕಾದ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಳೆದುಕೊಳ್ಳುತ್ತಾನೇನೋ ಎಂಬ ಅನುಮಾನ ಕಾಡತೊಡಗಿದೆ.

ಮತದಾರರು ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ ಚಲಾಯಿಸಬೇಕು. ರಾಜಕೀಯ ಪಕ್ಷಗಳ ತಂತ್ರಗಾರಿಕೆಯನ್ನು ಮೀರಿದ ಫಲಿತಾಂಶವನ್ನು ನೀಡಬೇಕು. ಅಂತಹ ಮಹತ್ವದ ಜವಾಬ್ದಾರಿಯನ್ನು ಮತದಾರರು ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ. ರಾಜಕೀಯ ಪಕ್ಷಗಳ ಚಿಹ್ನೆ ಬೇರೆ. ತಂತ್ರ ಬೇರೆ. ಆದರೆ ಸ್ವಾರ್ಥ ಸಾಧನೆಯಲ್ಲಿ ರಾಜಕಾರಣಿಗಳೆಲ್ಲರೂ ಒಂದೇ ಜಾತಿಗೆ ಸೇರಿದವರು.

ADVERTISEMENT

ಜನಸಾಮಾನ್ಯರ ಸಮಸ್ಯೆಗಳು ಅವರಿಗೆ ಗೌಣ. ಅಧಿಕಾರಲಾಲಸೆಯೇ ಮುಖ್ಯ. ಹೊರಗೆ ಬದ್ಧವೈರಿಗಳಂತೆ ಕಚ್ಚಾಡಿಕೊಂಡರೂ ಒಳಗೊಳಗೆ ಒಬ್ಬರಿಗೊಬ್ಬರು ಪಕ್ಷಾತೀತರಾಗಿ ಪರಸ್ಪರ ಸಹಾಯ–ಸಹಕಾರ ಮಾಡಿಕೊಂಡೇ ಬಂದವರು. ತಮ್ಮ ವೈಯಕ್ತಿಕ ಲಾಭಕ್ಕಾಗಿ ಪಕ್ಷಭೇದ ಮರೆತು ಅಧಿಕಾರ ದುರ್ಬಳಕೆ ಮಾಡಿಕೊಂಡವರು. ರಾಜಕಾರಣಿಗಳ ಒಳಒಪ್ಪಂದಗಳು ಪದೇ ಪದೇ ಬಹಿರಂಗವಾಗುತ್ತಿದ್ದರೂ ಮತದಾರರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಅವರ ಅರಿವಿನ ಕೊರತೆಯಿಂದ ಪಟ್ಟಭದ್ರರೇ ಆಯ್ಕೆಯಾಗುವಂತಾಗಿದೆ.

ಮತದಾರರು ಈ ಬಾರಿ ಅಂತಹ ತಪ್ಪು ಎಸಗಬಾರದು. ಜಾತಿ–ಪಂಗಡ, ಆಸೆ–ಆಮಿಷಗಳಿಗೆ ಬಲಿಯಾಗಬಾರದು. ಜನಪರವಾಗಿ ಯೋಚಿಸುವ, ದೂರದೃಷ್ಟಿಯುಳ್ಳ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರೌಢಿಮೆ ಪ್ರದರ್ಶಿಸಬೇಕು.

ಹರಿಕೃಷ್ಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.