‘ರಾಮನಾಥ’ ಅಂಕಿತದ ವಚನಗಳ ಕರ್ತೃ ದೇವರ ದಾಸಿಮಯ್ಯ ಎಂಬ ವಾದದ ಘೋರ ಅಪಚಾರವನ್ನು ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಪೊಟ್ಟಲ ಚೆರುವಿನಿಂದ ಆಳುತ್ತಿದ್ದ ಕಲ್ಯಾಣ ಚಾಳುಕ್ಯ ಚಕ್ರವರ್ತಿ ಇಮ್ಮಡಿ ಜಯಸಿಂಹನ (ಕ್ರಿ.ಶ. 1040) ರಾಣಿ ಸುಗ್ಗಲೆಗೆ ಶಿವಭಕ್ತಿಯ ಉಪದೇಶ ಮಾಡಿದ-ವನು ದೇವರ ದಾಸಿಮಯ್ಯ – ಇವನು ಬಹುಶಃ ಕಾವಿವಸ್ತ್ರದ ಬ್ರಹ್ಮಚಾರಿ.
ಇವನು ಏನು ಬರೆದಿರುವನೋ ತಿಳಿಯದು. ಆದರೆ ‘ರಾಮನಾಥ’ ಅಂಕಿತದ ನೇಕಾರ ವೃತ್ತಿಯ ಜೇಡರ ದಾಸಿಮಯ್ಯ ಕ್ರಿ.ಶ. 1140ರಲ್ಲಿದ್ದವನು. ಅವನು ಆದ್ಯ ವಚನಕಾರ ಮತ್ತು ಅವನ ಪತ್ನಿ ದುಗ್ಗಳೆಯೂ ವಚನಗಾರ್ತಿ. ‘ದೇವರ’ ದಾಸಿಮಯ್ಯ, ‘ಜೇಡರ’ ದಾಸಿಮಯ್ಯ ಇಬ್ಬರೂ ಸ್ಪಷ್ಟವಾಗಿ ಬೇರೆ ಬೇರೆ ಎಂಬುದನ್ನು ಎಲ್ಲ ವಿದ್ವಾಂಸರೂ ಮಾನ್ಯ ಮಾಡಿದ್ದಾರೆ.
ಈ ಸತ್ಯ ಸಂಗತಿಯನ್ನು ಕಡೆಗಣಿಸಿ, ದೇವರ ದಾಸಿಮಯ್ಯನೇ ‘ರಾಮನಾಥ’ ಅಂಕಿತದ ವಚನಕಾರ ಎಂದು ಭಾವಿಸುವುದಾದಲ್ಲಿ ಜೇಡರ ದಾಸಿಮಯ್ಯನ ಪತ್ನಿ ಸುಗ್ಗಳೆಯನ್ನು ಬ್ರಹ್ಮಚಾರಿ ದೇವರ ದಾಸಿಮಯ್ಯನಿಗೆ ಅನ್ವಯಿಸಿದಂತಾ-ಗುತ್ತದೆ.
ಅದೊಂದು ಘೋರ ಐತಿಹಾಸಿಕ, ನೈತಿಕ ಅಪಚಾರ. ಇದನ್ನು ಸರ್ಕಾರ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಗಂಭೀರವಾಗಿ ಲೆಕ್ಕಿಸಿ, ಕನ್ನಡ ವಿ.ವಿಯ ‘ದೇವರ ದಾಸಿಮಯ್ಯ ಪೀಠ’ ಎಂಬ ಹೆಸರನ್ನು ‘ಜೇಡರ ದಾಸಿಮಯ್ಯ ಪೀಠ’ ಎಂದು ಬದಲಾಯಿಸಬೇಕು.ಅಗತ್ಯ ಬಿದ್ದರೆ ಸರ್ಕಾರವು ನಾಡಿನ ಶ್ರೇಷ್ಠ ವಿದ್ವಾಂಸರ ಸಭೆ ಕರೆದು ಮೇಲಿನ ವಿಷಯದ ಬಗ್ಗೆ ಅವರ ಸಲಹೆಯನ್ನು ಪಡೆದುಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.