ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡದ್ದೊಂದೇ ಚಿಂತೆಯಲ್ಲ!

ಹೊಸಮನೆ ವೆಂಕಟೇಶ ​ಟಿ.ನರಸೀಪುರ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡದ್ದೊಂದೇ ಚಿಂತೆಯಲ್ಲ!
ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡದ್ದೊಂದೇ ಚಿಂತೆಯಲ್ಲ!   

ಸಾಹಿತ್ಯ ಸಮ್ಮೇಳನ ಸಾಹಿತ್ಯೇತರ ಕಾರಣಕ್ಕಾಗಿ ಸುದ್ದಿ (ಸದ್ದು) ಮಾಡುತ್ತಿದೆ. ಸಾಹಿತಿಯೊಬ್ಬರ ರಾಜಕೀಯ ನಿಲುವೇ ವಿವಾದಾಸ್ಪದವಾಗುತ್ತಿದೆ. ಆದರೆ ‘ಅದು ಹಾಗಲ್ಲ’ ಎಂಬ ವಾಸ್ತವವನ್ನು ಚಂಪಾರನ್ನು ವಿರೋಧಿಸುವವರೂ, ಸಮರ್ಥಿಸಿಕೊಳ್ಳುವವರೂ ಗಮನಿಸಿದ ಹಾಗೆ ಕಾಣುತ್ತಿಲ್ಲ.

ಚಂಪಾ ಅವರ ರಾಜಕೀಯ ನಿಲುವು ತಪ್ಪಲ್ಲ. ಆದರೆ ಅದನ್ನು ಹೊರಹಾಕುವ ಭರದಲ್ಲಿ ಅವರು ಒಂದು ರಾಜಕೀಯ ಪಕ್ಷದ ಪರ ನಿಂತರೇ ಎನ್ನುವುದು ಪ್ರಶ್ನೆ. ಅವರು ‘ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಿ’ ಎಂದು ಮಾತ್ರವೇ ಹೇಳಿಲ್ಲ ಎಂಬುದು ಸ್ಪಷ್ಟ. ಹಾಗೆ ಹೇಳಿದ್ದರೆ ಅಂತಹ ಹಲವು ಜಾತ್ಯತೀತ ಪಕ್ಷಗಳು ಕರ್ನಾಟಕದಲ್ಲಿವೆ. ಅದಕ್ಕೆ ಪೂರಕವಾಗಿ ‘ರಾಷ್ಟ್ರೀಯ ಜಾತ್ಯತೀತ ಪಕ್ಷ’ ಎಂದು ಹೇಳುತ್ತಾ, ಈಗಿನ ವಿರೋಧ ಪಕ್ಷದ ಹಲವು ತಪ್ಪು ನಿಲುವುಗಳನ್ನು ವಿರೋಧಿಸಿದ್ದಾರೆ.

ಇನ್ನು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು ಪುಸ್ತಕ ರೂಪದಲ್ಲಿ ಕೊಳೆಯುತ್ತಿರುವ ವಿಚಾರವನ್ನು ವಿಜಯಕಾಂತ ಪಾಟೀಲ ಪ್ರಸ್ತಾಪಿಸಿದ್ದಾರೆ (ಚಂಪಾ ಹೇಳಿಕೆ ಸರಿ, ವಾ.ವಾ., ಡಿ. 1). ಅಧ್ಯಕ್ಷರ ಭಾಷಣಗಳು ಮಾತ್ರವಲ್ಲ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳೂ ಅದೇ ಸ್ಥಿತಿಯಲ್ಲಿವೆ. ಅದಕ್ಕೆ ಪ್ರಮುಖ ಕಾರಣ ಸಾಹಿತ್ಯ ಪರಿಷತ್ತಿಗೆ ಗಟ್ಟಿತನ ಇಲ್ಲದಿರುವುದು. ಸದ್ಯ ಸಾಹಿತ್ಯ ಪರಿಷತ್ತಿನ ಚುನಾವಣೆಯೂ ವಿಧಾನಸಭೆ, ಲೋಕಸಭೆಯ ಚುನಾವಣೆಗಳ ಮಟ್ಟಕ್ಕೆ ಇಳಿದಿದೆ ಎಂಬ ದೂರಿದೆ. ಈಗ ಸಮ್ಮೇಳನಾಧ್ಯಕ್ಷ ಭಾಷಣವೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂಬ ಚಿಂತೆ ನನ್ನಂಥವರಿಗೆ. ಹಾಗಾದಲ್ಲಿ ಅದಕ್ಕೆ ಚಂಪಾ ಮುನ್ನುಡಿ ಬರೆದಂತಾಗುವುದಿಲ್ಲವೇ? ಈ ದಿಸೆಯಲ್ಲಿ ದೇವನೂರ ಮಹಾದೇವ ಅವರ ನಿಲುವು ಮಹತ್ವದ್ದು. ಆದರೆ ಅವರ ನಿಲುವನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಯಾಕೆಂದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡದ್ದೊಂದೇ ಚಿಂತೆಯಲ್ಲ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.