ADVERTISEMENT

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಬಸ್ ಬಾಗಿಲು ಸರಿಮಾಡಿ
ಎ.ಜಿ.ಎಸ್. ಲೇ ಔಟ್‌ನಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೊರಡುವ 45 ಡಿ ಬಸ್ಸು ಕೆಎ 50 ಎಫ್ - 130, ಮಧ್ಯದ ಬಾಗಿಲಿನ ಜಂಟಿ ಬಿಟ್ಟು ಹೋಗಿದೆ. ಈಗ ಅದಕ್ಕೆ ಟೇಪಿನಿಂದ ಸುತ್ತಿದ್ದಾರೆ. ಬಸ್ಸಿಗೆ ಹತ್ತುವಾಗ ಬಲಗಡೆಯ ಮೇಲಿನ ಭಾಗದ ಬಾಗಿಲಿಗೆ ಕೂಡಲೆ ವೆಲ್ಡಿಂಗ್ ಮಾಡಿಸಬೇಕು ಹಾಗೂ ಪ್ರಯಾಣಿಕರು ಇಳಿಯುವಾಗ ಇಲ್ಲವೆ ಹತ್ತುವಾಗ ತೊಂದರೆ ಆಗುತ್ತಿದೆ. ಇದನ್ನು ಸರಿಪಡಿಸುತ್ತೀರೆಂದು ನಂಬೋಣವೆ?
- ವಿ. ಕೆ. ಸುಬ್ಬಣ್ಣ


ಬಸ್ ಸಂಖ್ಯೆ ಹೆಚ್ಚಿಸಿ
ಭೂಪಸಂದ್ರದಿಂದ ಗೆದ್ದಲಹಳ್ಳಿ ಮಾರ್ಗ ಸಂಖ್ಯೆ 278 ಶಿವಾಜಿನಗರದ ಬಸ್‌ಗಳ ಸಂಚಾರದಲ್ಲಿ ಕಡಿತವಾಗಿದೆ. ಈ ಮಾರ್ಗದಲ್ಲಿ ಓಡಾಡುತ್ತಿದ್ದ ವಾಹನಗಳನ್ನು ವಿದ್ಯಾನಿಕೇತನ ಅಂತಹ ಇತರೆ ಖಾಸಗಿ ಶಾಲೆಗಳಿಗೆ ವಹಿಸಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ದಿನನಿತ್ಯಕ್ಕೆ ಮತ್ತಷ್ಟು ಬಸ್ ನಂ. 278ನ್ನು ಕಡಿತಗೊಳಿಸಿ ಈಗ ಗಾಯದ ಮೇಲೆ ಬರೆ ಎಳೆದಂತೆ ಮಿನಿ ವಾಹನ ಓಡಾಡುತ್ತಿದೆ. ಭೂಪಸಂದ್ರದಿಂದಲೇ ಪ್ರಯಾಣಿಕರು ಭರ್ತಿಯಾಗುವುದರಿಂದ ನಾಗಶೆಟ್ಟಿಹಳ್ಳಿ, ಸಂಜಯನಗರ, ಗೆದ್ದಲಹಳ್ಳಿ ಪ್ರಯಾಣಿಕರಿಗೆ ಸ್ಥಳಾವಕಾಶ ಇಲ್ಲ. ವಯಸ್ಸಾದವರಿಗೂ ತೊಂದರೆ. ಈ ಅವ್ಯವಸ್ಥೆಯನ್ನು ಜೇಬುಗಳ್ಳರು ಕಸುಬಿಗೆ ಬಳಸಿಕೊಳ್ಳುತ್ತಾರೆ.

ಹೀಗಾಗಿ ದಿನಾ ಬೆಳಿಗ್ಗೆ 7 ರಿಂದ 10-30ರ ತನಕವೂ ಬಸ್ಸು ಭರ್ತಿಯಾಗುವುದರಿಂದ ಆಶ್ವತ್ಥನಗರ, ಪ್ರಯಣಿಕರು ಯಮಯಾತನೆ ಅನುಭವಿಸಬೇಕಾಗಿದೆ.ಜನ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕಾದ ಬಿ.ಎಂ.ಟಿ.ಸಿ., ಖಾಸಗಿ ಶಾಲೆಗಳಿಗೆ ಎರವಲು ನೀಡಿ ನಿತ್ಯ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ.

ಬಸ್‌ಗೆ ಹತ್ತುವ ಆತುರದಲ್ಲಿ ಎಷ್ಟೊ ಮಂದಿ ಆಯ ತಪ್ಪಿ ಕೆಳಗೆ ಬಿದ್ದವರೂ ಇದ್ದಾರೆ. 278 ಬಸ್ ಓಡಾಟವನ್ನು ಮೊಟಕುಗೊಳಿಸಿರುವುದನ್ನು ಸಾರಿಗೆ ಸಚಿವರಿಗೆ. ನಗರ ಸಾರಿಗೆ ಸಂಚಾರ ನಿಯಂತ್ರಕರು, ಶಿವಾಜಿ ನಗರ ಸಾರಿಗೆ ವ್ಯವಸ್ಥಾಪಕರಿಗೂ ಪತ್ರ ಬರೆಯಲಾಗಿದೆ ಆದರೂ ಪ್ರಯೋಜನವಿಲ್ಲ.

ಈಗಲಾದರೂ ಸಂಬಂಧಿಸಿದವರು ಮೊಟಕುಗೊಳಿಸಿರುವ ಬಸ್ಸುಗಳನ್ನು ಪುನರಾರಂಭಿಸುವುದರ ಮೂಲಕ, ಗೆದ್ದಲಹಳ್ಳಿ ಗ್ರಾಮದಿಂದಲೂ ಬೆಳಗಿನ ವೇಳೆಯಲ್ಲಿ ಬಸ್ ಸಂಚರಿಸಲು ಕ್ರಮಕೈಗೊಳ್ಳಲು ಮನವಿ.
- ಎಂ. ವೀರಭದ್ರಸ್ವಾಮಿ

ಸ್ಲಂ ಕೇಡಿಗಳ ಕಾಟ ತಪ್ಪಿಸಿ
ಬಿ.ಟಿ.ಎಂ. ವಾರ್ಡ್ ನಂ. 176, ನೈನಪ್ಪ ಶೆಟ್ಟಿ ಪಾಳ್ಯ ಸರ್ವೆ ನಂ. 74 ಮತ್ತು 135 ರಲ್ಲಿ ಜಿಡಿ ಮರ ಸ್ಲಂ ಇದೆ. ಈ ಸ್ಲಂನಲ್ಲಿ ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಬೀದಿ ಕಾಮಣ್ಣರ ಕಾಟ ಜಾಸ್ತಿಯಾಗಿದೆ. ಹಗಲು ಹೊತ್ತಿನಲ್ಲಿ ಮತ್ತು ರಾತ್ರಿ ವೇಳೆ ಹೆಣ್ಣುಮಕ್ಕಳು ರಸ್ತೆಯಲ್ಲಿ ಓಡಾಡಲು ಕಷ್ಟಕರವಾಗಿದೆ.

ನೈನಪ್ಪ ಶೆಟ್ಟಿ ಪಾಳ್ಯ ಗ್ರಾಮದಲ್ಲಿ ಹಲವಾರು ಗಾರ್ಮೆಂಟ್ಸ್ ಕಾರ್ಖಾನೆ ಇರುವ ಕಾರಣ ಜಿಡಿ ಮರ ಬಸ್ ನಿಲ್ದಾಣದಿಂದ, ಜೆ.ಪಿ. ನಗರ 3ನೇ ಹಂತದ ಬಸ್ ನಿಲ್ದಾಣದಿಂದ ಹೋಗಿ ಬರುವ ಹೆಣ್ಣು ಮಕ್ಕಳ ಮೇಲೆ ಸ್ಲಂ ಕೇಡಿಗಳು ಲೈಂಗಿಕ ಕಿರುಕುಳ ನೀಡುತ್ತಾರೆ ಹಾಗೂ ರಸ್ತೆಗೆ ಅಡ್ಡಲಾಗಿ ವಾಹನಗಳ ಮೇಲೆ ಕುಳಿತುಕೊಂಡು ಸಿಗರೇಟ್ ಹೊಗೆಯನ್ನು ಮುಖದ ಮೇಲೆ ಬಿಡುತ್ತಾರೆ.

ಜಿಡಿ ಮರ ಸ್ಲಂ ರಸ್ತೆಯಲ್ಲಿ ಹೋಗಿ ಬರಲು ಹೆಣ್ಣು ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಕೇಳಲು ಹೋದರೆ ಬೆದರಿಕೆ ಹಾಕುತ್ತಾರೆ. ಸಂಜೆಯಾದರೆ ಚಾಕು ಚೂರಿ ತೋರಿಸಿ ಮೊಬೈಲ್, ಹಣ, ಒಡವೆ, ಚಿನ್ನದ ವಸ್ತುಗಳಿದ್ದರೆ ಕಿತ್ತುಕೊಳ್ಳುತ್ತಾರೆ. ಯಾರಿಗಾದರೂ ತಿಳಿಸಿದರೆ, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ.
 
ಇದರ ಬಗ್ಗೆ ಪೊಲೀಸ್ ಆಯುಕ್ತರು, ಸಿಸಿಬಿ ಪೊಲೀಸರು, ಹಗಲು ರಾತ್ರಿ ಗಸ್ತು ತಿರುಗಿ ಬೀದಿ ಕಾಮಣ್ಣರನ್ನು ಮತ್ತು  ರೌಡಿಗಳನ್ನು ಮಟ್ಟಹಾಕಿ ನೊಂದ ಮಹಿಳೆಯರ ಮಾನ, ಪ್ರಾಣ ಉಳಿಸಬೇಕಾಗಿ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
- ಲಲಿತ, ಗೌರಮ್ಮ ನೊಂದ ನಿವಾಸಿಗಳು

ಮಹಿಳಾ ಸೀಟು ಬಿಟ್ಟುಕೊಡಿ
ಬಿ.ಎಂ.ಟಿ.ಸಿ. ಬಸ್‌ಗಳಲ್ಲಿ `ಮಹಿಳೆಯರಿಗೆ~ ಎಂದು ಮೀಸಲಾಗಿರಿಸಿದ ಆಸನಗಳಲ್ಲಿ ಕುಳಿತು ಪ್ರಯಾಣಿಸುವ ಪುರುಷರು ಕೆಲವರು `ಸೀಟು ಬಿಟ್ಟು ಕೊಡಿ~ ಎಂದು ವಿನಂತಿಸಿದರೂ ನಿರ್ಲಕ್ಷ್ಯದಿಂದ ಮಾತಾಡುತ್ತಾರೆ.

ಇತ್ತೀಚೆಗೆ ಮೆಜೆಸ್ಟಿಕ್‌ನಿಂದ ಸಂಜೆ ಐದು ಗಂಟೆಗೆ ಗೆಳತಿಯೊಂದಿಗೆ ಟಿ. ದಾಸರಹಳ್ಳಿಗೆ (ನೆಲಮಂಗಲದ) ಬಸ್ ಹತ್ತಿದೆ. ಕೈಯಲ್ಲಿ ಲಗೇಜ್ ಇತ್ತಲ್ಲದೆ ಗೆಳತಿಗೆ ಜ್ವರ ಬೇರೆ ಇದ್ದುದರಿಂದ ಯಾವುದಾದರೂ ಆಸನ ಖಾಲಿಯಿದೆಯೇ ಎಂದು ನೋಡುತ್ತಿದ್ದೆವು.
 
ಆಗ `ಮಹಿಳೆಯರಿಗೆ~ ಎಂದು ಮೀಸಲಾಗಿರಿಸಿದ್ದ ಎರಡು ಆಸನಗಳಲ್ಲಿ ಪುರುಷರಿಬ್ಬರು ಕುಳಿತಿದ್ದರು. `ಸೀಟು ಬಿಟ್ಟು ಕೊಡಿ~ ಎಂದು ವಿನಂತಿಸಿದೆ. ಅವರು ನಿರ್ಲಕ್ಷ್ಯದಿಂದ ಮಾತಾಡಿದರೇ ವಿನಹ ಸೀಟು ಬಿಟ್ಟು ಕೊಡಲೇ ಇಲ್ಲ.

ದಿನವೂ ಈ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇದು ನಿತ್ಯದ ಅನುಭವ. ನಿರ್ವಾಹಕರೂ ನಿರ್ಲಕ್ಷ್ಯ ತಾಳುತ್ತಾರೆ. ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಾರೆ.
ಈ ರೀತಿ ನಿಯಮ ಉಲ್ಲಂಘಿಸುವವರಿಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಕ ಶಿಕ್ಷೆ ವಿಧಿಸುವಂತಾಗಬೇಕು.
- ಗೀತಾ ಬರ್ಲ

ಇನ್ನಷ್ಟು ಬಸ್ ವ್ಯವಸ್ಥೆ ನೀಡಿ
ಕಳೆದ 17 ವರ್ಷದಿಂದ ನಾವು ಹೊಂಗಸಂದ್ರದಲ್ಲಿ ವಾಸಿಸುತ್ತಿದ್ದೇವೆ. ಹೊಂಗಸಂದ್ರದಿಂದ ಬನಶಂಕರಿ ತಲುಪಲು ಪ್ರತಿ ದಿನ ಹರಸಾಹಸ ಪಡಬೇಕಾಗಿದೆ. ಶಾಲಾ ಮಕ್ಕಳು, ಉದ್ಯೋಗಿಗಳು ಎಲ್ಲಾ ಇದೇ ಮಾರ್ಗವಾಗಿ ಸಂಚರಿಸಬೇಕು. ಇರುವ ಒಂದೇ ಬಸ್ಸಿನಲ್ಲಿ (343ಎಂ) ಪ್ರಯಾಣಿಸುವುದು ಕಷ್ಟವಾಗಿದೆ. ಹೀಗಾಗಿ ಬಸ್ಸುಗಳ ಸಂಖ್ಯೆ ಹೆಚ್ಚಿಸಿ ಹೊಂಗಸಂದ್ರ ಜನತೆಗೆ ಸಹಕರಿಸಬೇಕು.
-ಕಿರಣ್ ಹೊಂಗಸಂದ್ರ

ಸ್ಕೈವಾಕ್ ನಿರ್ಮಿಸಿ
ಬೆಂಗಳೂರು ಡೈರಿ ವೃತ್ತದಿಂದ ಬನ್ನೇರುಘಟ್ಟಕ್ಕೆ ಹೋಗುವ ರಸ್ತೆಯ ಎಡಭಾಗ ಆನೇಕಲ್ ಮತ್ತು ಆಕ್ಸೆಂಚರ್ ಐ.ಟಿ. ಕಂಪೆನಿಗಳು, ಬಲಭಾಗದಲ್ಲಿ ಕೌಶಲ್ಯ ಭವನ, ಕಾರ್ಮಿಕ ಭವನ, ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖಾ ಕಚೇರಿಗಳಿದ್ದು ದಿನನಿತ್ಯ ಸಾವಿರಾರು ಪ್ರಶಿಕ್ಷಣಾರ್ಥಿಗಳು ಐ.ಟಿ.ಐ. ಸಂಸ್ಥೆಗೆ ಮತ್ತು ಕಚೇರಿಗಳಿಗೂ ಸಹ ಸಾವಿರಾರು ಸಾರ್ವಜನಿಕರು ಬರುತ್ತಿರುತ್ತಾರೆ.

ಕಚೇರಿಗಳಿಗೆ ಬಂದ ಸಾರ್ವಜನಿಕರು ಹಾಗೂ ಕಚೇರಿಯಿಂದ ಹೊರ ಹೋಗುವವರು ರಸ್ತೆ ದಾಟಲು ಪ್ರಯಾಸ ಪಡಬೇಕಾಗಿರುತ್ತದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಮಿಕ ಭವನದ ಮುಂದೆ ಒಂದು ಸ್ಕೈವಾಕ್ ನಿರ್ಮಿಸಿದಲ್ಲಿ ತುಂಬಾ ಅನುಕೂಲವಾಗುತ್ತದೆ.
- ಜೆ. ಆರ್. ಆದಿನಾರಾಯಣ ಮುನಿ

ಪ್ರಜಾವಾಣಿ ಫಲಶ್ರುತಿ
ಮನವಿಗೆ ಸ್ಪಂದಿಸಿದ ಇಲಾಖೆ
ವಾರ್ಡ್ 134, ಬಾಪೂಜಿ ನಗರದಲ್ಲಿ ನೀರು ಸರಬರಾಜು ಮತ್ತು 3ನೇ `ಬಿ~ ಮುಖ್ಯ ರಸ್ತೆ ಬೋರ್‌ವೆಲ್ ಪೈಪ್ ಹೊಡೆದಿರುವ ಬಗ್ಗೆ ಜೂನ್ 26 ರಂದು ಕುಂದು - ಕೊರತೆಯಲ್ಲಿ ಮನವಿ ಮಾಡಲಾಗಿತ್ತು. ಜಲಮಂಡಳಿ ಅಧಿಕಾರಿಗಳು ಈ ಮನವಿಗೆ ಸ್ಪಂದಿಸಿ ಜೂನ್ 26 ರಂದು ಬೆಳಿಗ್ಗೆ 11 ರಿಂದ 2-30ರ ಸಮಯದಲ್ಲಿ ಮುಗಿಸಿ ಕೊಳವೆ ಬಾವಿ ನೀರಿನ ಬಳಕೆ ಹೆಚ್ಚಾಗಿದೆ. ಅದಕ್ಕಾಗಿ ಸಂಬಂಧಪಟ್ಟವರಿಗೆ ಧನ್ಯವಾದಗಳು.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.