ADVERTISEMENT

ಕೆರೆ ಶುಲ್ಕ ಬೇಡ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಕರ್ನಾಟಕ ಸರ್ಕಾರವು 3-1-12ರ ಅಧಿಸೂಚನೆ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಮತ್ತು ಯೋಜನಾ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ನೀಡುವ ಸಮಯದಲ್ಲಿ ಅರ್ಜಿದಾರರಿಂದ ಪ್ರಸ್ತುತ ಶುಲ್ಕದ ಜೊತೆಗೆ ಕೆರೆಗಳ ಪುನಃಶ್ಚೇತನ ಶುಲ್ಕವೆಂದು ಪ್ರತಿ ಎಕರೆಗೆ ಒಂದು ಲಕ್ಷ ರೂ ಹೆಚ್ಚುವರಿಯಾಗಿ ಸಂಗ್ರಹಿಸಲು ಆದೇಶಿಸಲಾಗಿದೆ.

ಈಗಾಗಲೇ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಮತ್ತು ವಿನ್ಯಾಸ ಅನುಮೋದನೆ ನಿಯಮಗಳನ್ವಯ ಉದ್ಯಾನ, ನಾಗರಿಕ ಸೌಲಭ್ಯ ಮತ್ತು ರಸ್ತೆ ನಿರ್ಮಾಣಕ್ಕಾಗಿ ಅರ್ಧದಷ್ಟು ಭೂಮಿ ಕಳೆದುಕೊಂಡು ಉಳಿದ ಅರ್ಧದಷ್ಟು ಜಮೀನಿನಲ್ಲಿ ಮಾತ್ರ ವಸತಿ ನಿವೇಶನಗಳ ರಚನೆ ಮಾಡಬೇಕಾಗಿರುವುದರಿಂದ ಭೂ ಮಾಲೀಕರು ವಿಶೇಷವಾಗಿ ಖಾಸಗಿ ಡೆವಲಪರ್ಸ್‌ ಗಳು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಗಾಯದ ಮೇಲೆ ಬರೆ ಎಂಬಂತೆ ಕೆರೆಗಳ ಪುನಶ್ಚೇತನ ಶುಲ್ಕವೆಂದು ಅರ್ಜಿದಾರರಿಂದ ಪ್ರತಿ ಎಕರೆಗೆ ಒಂದು ಲಕ್ಷ ರೂ ಹಣ ಹೆಚ್ಚುವರಿಯಾಗಿ ವಸೂಲಿ ಮಾಡಲು ಮಾಡಿದ ಆದೇಶದಿಂದ ಜನರಿಗೆ ದಿಗ್ಭ್ರಮೆಯಾಗಿದೆ. ಈ ರೀತಿ ವಿಧಿಸುವ ಹೆಚ್ಚುವರಿ ಶುಲ್ಕವನ್ನು ಪರೋಕ್ಷವಾಗಿ ನಿವೇಶನ ಖರೀದಿಸುವ ಸಾಮಾನ್ಯ ಜನರ ಮೇಲೆ ಹೊರೆಯಾಗುವುದನ್ನು ಸರ್ಕಾರವು ಗಮನಿಸಬೇಕು.
 
ವಿನ್ಯಾಸ ಅನುಮೋದನೆಗೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಯೋಜನಾ ಪ್ರಾಧಿಕಾರಗಳಿಂದ ಅಭಿವೃದ್ಧಿ ಶುಲ್ಕ ಮತ್ತು ಮೇಲ್ವಿಚಾರಣೆ ಶುಲ್ಕವೆಂದು ಈಗಾಗಲೇ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ.

ಹೆಚ್ಚುವರಿಯಾಗಿ ಕೆರೆಗಳ ಪುನಃಶ್ಚೇತನ ಶುಲ್ಕ ವಿಧಿಸುವುದರಿಂದ ಸಾಮಾನ್ಯ ಭೂ ಮಾಲೀಕರಿಂದ ಈ ಹೊರೆ ಭರಿಸಲಾಗದೇ ಇನ್ನು ಮುಂದೆ ವಿನ್ಯಾಸ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸದೇ ಅನಧಿಕೃತ ಬಡಾವಣೆಗಳ ರಚನೆಗೆ ಸ್ವತಃ ಸರ್ಕಾರವೇ ಪರೋಕ್ಷವಾಗಿ ಉತ್ತೇಜನ ನೀಡಿದಂತಾಗುತ್ತದೆ.

ಆದುದರಿಂದ, ಅಕ್ರಮ ಬಡಾವಣೆಗಳ ರಚನೆಯಾಗುವುದನ್ನು ತಡೆಗಟ್ಟಲು ಮತ್ತು ಸಾಮಾನ್ಯ ಭೂ ಮಾಲೀಕರು ಹಾಗೂ ನಿವೇಶನ ಖರೀದಿದಾರರ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ಕೆರೆಗಳ ಪುನಃಶ್ಚೇತನ ಶುಲ್ಕವನ್ನು ರದ್ದುಗೊಳಿಸಿ ಆದೇಶ ಮಾಡಲು ವಿನಂತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.