ADVERTISEMENT

ಜನಪ್ರತಿನಿಧಿಗಳ ವಿರುದ್ಧವೂ ಕ್ರಮ ಜರುಗಲಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಮುಖ್ಯಮಂತ್ರಿಯವರು ಜಿ.ಪಂ. ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಸವಾರಿ ಬೇಡ (ಪ್ರ. ವಾ. ಅ. 19) ಎಂದು ನಗುತ್ತಾ ಹೇಳಿರುವುದು ಆನೆ ಚರ್ಮದ ಕೆಲವು ಜನ ಪ್ರತಿನಿಧಿಗಳು ಎಷ್ಟರ ಮಟ್ಟಿಗೆ ಪಾಲಿಸುವರೋ ಗೊತ್ತಿಲ್ಲ .

 ಹಲವು ಜನಪ್ರತಿನಿಧಿಗಳು ಅಧಿಕಾರ ವರ್ಗದ ಮೇಲೆ ದಬ್ಬಾಳಿಕೆ ಮಾಡುವುದಕ್ಕಾಗಿಯೇ ಜನಪ್ರತಿನಿಧಿಗಳಾಗಿದ್ದಾರೆ ಎಂದೆನಿಸುತ್ತೆ. ಕೇವಲ ಅವರಿಗೆ ಬುದ್ಧಿಮಾತು ಹೇಳಿದರೆ ಸಾಕಾಗುವುದಿಲ್ಲ.

ಬಹಳಷ್ಟು ಜನಪ್ರತಿನಿಧಿಗಳಿಗೆ ಶಿಕ್ಷಣ, ಸಮಾಜ ಸೇವೆ, ರಾಜಕೀಯ, ಜನರು ಮತ್ತು ಜನಪ್ರತಿನಿಧಿಗಳು ಈ ಶಬ್ದಗಳ ಅರಿವಿನ ತಿಳುವಳಿಕೆ ಇಲ್ಲದಿರುವುದರಿಂದ ನೌಕರ ವರ್ಗದವರ ಮೇಲೆ ದಬ್ಬಾಳಿಕೆ ನಡೆಸುತ್ತಿರಬಹುದು. ಅಥವಾ ಜನಪ್ರತಿನಿಧಿಗಳು ತಾವು ಮಾಡಿದ ತಪ್ಪನ್ನು ಮುಚ್ಚಿಹಾಕಲು ಈ ರೀತಿ ವರ್ತಿಸುತ್ತಿರಬಹುದು.

 ಇವರಿಗೆ ತಿಳುವಳಿಕೆಯ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಆ ಮೂಲಕ ಅವರಿಗೆ ಅರಿವು ಮೂಡಿಸಬೇಕು. ನಂತರ ಅವರ ಅನೀತಿ ವರ್ತನೆ ಮುಂದುವರೆದರೆ ಅವರ ಸದಸ್ಯತ್ವ ರದ್ದುಪಡಿಸುವ ಇಲ್ಲವೇ ಕಠಿಣ ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.

ಸರ್ಕಾರಿ ನೌಕರರು ಕಳೆದ 25 ವರ್ಷದಿಂದ ವೇತನ ತಾರತಮ್ಯ ನಿವಾರಣೆ ಬಗ್ಗೆ ಹಲವಾರು ಸಾರಿ ಮುಷ್ಕರ ಮತ್ತು ಉಪವಾಸ ಮಾಡಿ ಬೇಡಿಕೆ ಮುಂದಿಟ್ಟರೂ ಅದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದ ಸರ್ಕಾರ, ಜನಪ್ರತಿನಿಧಿಗಳ ಬೇಡಿಕೆಗಳು ರಾತ್ರೋ ರಾತ್ರಿ ಈಡೇರುತ್ತಿರುವುದು ವಿಚಿತ್ರ ಆದರೂ ಸತ್ಯ.

ಜಿ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಭತ್ಯೆ, ವೇತನ, ಗೂಟದ ಕಾರು .... ಬೇಡಿಕೆ ಬಂದ ದಿನದಿಂದ ಯೋಚಿಸಿ ಅನುಕೂಲ ಮಾಡಿಕೊಡುವುದಾಗಿ ಆಶ್ವಾಸನೆ ದೊರೆತದ್ದು ಸಂತೋಷದ ವಿಷಯವಾದರೂ, ಯೋಚಿಸುವುದು ಸೂಕ್ತ. ಜನಪ್ರತಿನಿಧಿಗಳಿರುವುದು ಸಮಾಜದ ಹಿತಚಿಂತನೆಗೆ ಹೊರತು ಸ್ವ-ಹಿತ ಚಿಂತನೆಗೆ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.