ADVERTISEMENT

ಟಿಪ್ಪುವಿನ ‘ಮಿತಿ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST

ಇತಿಹಾಸಕಾರ ಇರ್ಫಾನ್ ಹಬೀಬ್ ಅವರು, ‘ಟಿಪ್ಪುವು ಪ್ರಜಾಪೀಡಕನೂ ಅಲ್ಲ, ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ’ ಎಂದು ಹೇಳಿರುವುದು ಅಷ್ಟರಮಟ್ಟಿಗೆ ಸ್ವಾಗತಾರ್ಹವಾಗಿದೆ. ಇದು ಟಿಪ್ಪುವಿನ ವ್ಯಕ್ತಿತ್ವವನ್ನು ಕುಂದಿಸುವುದೂ ಇಲ್ಲ, ವೈಭವೀಕರಿಸುವುದೂ ಇಲ್ಲ. ಆದರೆ, ‘ಬ್ರಿಟಿಷರ ವಿರುದ್ಧ ಭಾರತದ ಹೋರಾಟದಲ್ಲಿ ಆತ ಖಂಡಿತವಾಗಿಯೂ ಪ್ರಮುಖ ವ್ಯಕ್ತಿಯಾಗಿ ಪರಿಗಣಿತನಾಗುತ್ತಾನೆ’ ಎಂದೂ ಅವರು ಹೇಳಿರುವುದು ವಿಶೇಷವಾಗಿ ಗಮನಿಸುವಂತಹದ್ದಾಗಿದೆ.

ಬ್ರಿಟಿಷರ ವಿರುದ್ಧ ಭಾರತದ ಹೋರಾಟದಲ್ಲಿ... ಎಂದರೆ, ಇನ್ನೊಂದು ಅರ್ಥದಲ್ಲಿ ಸ್ವಾತಂತ್ರ್ಯದ ಹೋರಾಟ ಎಂದೂ ಧ್ವನಿಸುತ್ತದೆ. ಇದನ್ನು, ತನ್ನ ಹಾಗೂ ತನ್ನ ಪ್ರಾಂತ್ಯದ ಸ್ವಾತಂತ್ರ್ಯ ಎಂದೇ ನಮ್ಮಂತಹ ಇತಿಹಾಸದ ವಿದ್ಯಾರ್ಥಿಗಳು ಗ್ರಹಿಸುತ್ತೇವಲ್ಲವೇ? ಏಕೆಂದರೆ, ಆಗಿನ ಎಲ್ಲಾ ದೊರೆಗಳಿಗೂ ಇದ್ದದ್ದು ತಮ್ಮ, ತಮ್ಮ ಸಂಸ್ಥಾನಗಳ ಹಿತಾಸಕ್ತಿಯೇ ಹೊರತು ಇಡೀ ದೇಶದ ಕಾಳಜಿ ಅಲ್ಲ.

ಕಳೆದ ವರ್ಷವೇ ಪ್ರಸ್ತಾಪವಾದಂತೆ, ಗಾಂಧೀಜಿ ಅಂತಹವರು ನೇತೃತ್ವ ವಹಿಸುವ ಮೊದಲು ಸ್ವಾತಂತ್ರ್ಯದ ಹಾಗೂ ಇಡೀ ದೇಶದ ಪರಿಕಲ್ಪನೆಯಾದರೂ ಎಲ್ಲಿತ್ತು?

ADVERTISEMENT

ಹೀಗಾಗಿ, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎನ್ನುವುದಾದರೆ, ಆ ಕಾಲದ ಇತರ ಎಲ್ಲಾ ಪ್ರಾಂತೀಯ ರಾಜ, ರಾಣಿಯರನ್ನೂ ಹಾಗೇ ಗುರುತಿಸುವುದು ನ್ಯಾಯವೆನಿಸುತ್ತದೆ. ಅದು ಅವರವರ ಹೋರಾಟಕ್ಕೆ ಇದ್ದ ಮಿತಿಯನ್ನು ಹೇಳಿದಂತೆಯೇ ವಿನಾ ಯಾರಿಗೂ ಅವಮಾನ ಮಾಡುವಂತಹದ್ದಾಗುವುದಿಲ್ಲ.
–ಡಾ. ಟಿ. ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.