ಬೆಂಗಳೂರಿನಲ್ಲಿ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಸಿನಿಮಾ ಮಾಧ್ಯಮದ ಇಬ್ಬರು ಸಹೋದರರು, ‘ಇಂಥ ಪ್ರಕರಣ ನಡೆಯಬಾರದು, ಯಾರಿಗೂ ಇಂಥ ಪರಿಸ್ಥಿತಿ ಬರಬಾರದು’ ಎಂದು ಮರುಗಿದರು. ಅವರ ಮಾನವೀಯ ಕಾಳಜಿ ಅಭಿನಂದನೀಯ.
ಆದರೆ ನಮ್ಮಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ಹೆಚ್ಚೂ ಕಡಿಮೆ ಶೇ 98ರಷ್ಟು ಸಿನಿಮಾಗಳು ಹೊಡಿ, ಬಡಿ, ಕಡಿ, ಲಾಂಗು, ಮಚ್ಚು, ರೊಚ್ಚಿನ ಸಿನಿಮಾಗಳೇ ಆಗಿವೆ. ಎಲ್ಲ ಭಾಷೆಯ ಸಿನಿಮಾಗಳಿಗೂ ಈ ಮಾತು ಅನ್ವಯಿಸುತ್ತದೆ. ‘ಸಮಾಜದಲ್ಲಿ ನಡೆಯುವುದನ್ನೇ ನಾವು ತೋರಿಸುತ್ತೇವೆ’, ‘ಜನ ಬಯಸುವುದನ್ನೇ ಸಿನಿಮಾ ಕೊಡುತ್ತದೆ’ ಎಂದು ಸಿನಿಮಾ ಮಂದಿ ಹೇಳುವುದನ್ನು ಕೇಳುತ್ತಿರುತ್ತೇವೆ. ವಾಸ್ತವವೆಂದರೆ, ಸಿನಿಮಾದಲ್ಲಿ ತೋರಿಸುವಷ್ಟು ಹಿಂಸೆ ಸಮಾಜದಲ್ಲಿ ಇಲ್ಲ. ಸಿನಿಮಾ ನೋಡುವಾಗ ಜನರು, ‘ಇನ್ನೊಂದೆರಡು ಸರಿಯಾಗಿ ಇಕ್ಕು ಅವ್ನಿಗೆ..,’ ಅಂತ ಅನ್ನಬಹುದಾದರೂ, ನಿಜ ಜೀವನದಲ್ಲಿ ಹೊಡೆತ ತಿಂದವನನ್ನು ಕಂಡರೆ ‘ಅಯ್ಯೋ, ಪಾಪ.., ಛೇ..,’ ಎಂದು ಮರುಗುತ್ತಾರೆ.
ಸಿನಿಮಾ ಮಂದಿಯಲ್ಲಿ ಕೇಳಿಕೊಳ್ಳುವುದಿಷ್ಟೇ; ನಿಜ ಜೀವನದಲ್ಲಿ ನೀವು ಎಷ್ಟು ಮೃದು ಹೃದಯಿಗಳೋ, ಅದರಲ್ಲಿ ಸ್ವಲ್ಪವನ್ನು ಸಿನಿಮಾಗಳಲ್ಲೂ ತೋರಿಸಿ. ನೂರರಲ್ಲಿ, ಐವತ್ತು ಸಿನಿಮಾಗಳಾದರೂ ಹೊಡೆದಾಟ ರಹಿತವಾಗಿ ಬರಲಿ ಎಂದು ಹಾರೈಸುವುದು ತುಂಬಾ ದುರಾಸೆಯೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.