ADVERTISEMENT

ನಾಟಕ ಶಿಕ್ಷಕರ ನೇಮಕವಾಗಲಿ

ರೂಪ ಹಾಸನ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಈಗ ಮತ್ತೆ ಚಾಲನೆ ದೊರೆತಿದೆ. ಇತರೆ ವಿಷಯಗಳ ಶಿಕ್ಷಕರ ನೇಮಕಾತಿಯಂತೆಯೇ ನಾಟಕ ಶಿಕ್ಷಕರ ನೇಮಕಾತಿಯೂ ಆಗಬಹುದೆಂದು ಸರ್ಕಾರಿ ಹಾಗೂ ಖಾಸಗಿ ರಂಗ ಅಧ್ಯಯನ ಕೇಂದ್ರಗಳಿಂದ ರಂಗ ಶಿಕ್ಷಣದ ಪದವಿ ಪಡೆದ ನೂರಾರು ಅರ್ಹ ಪದವೀಧರರು ಚಾತಕಪಕ್ಷಿಯಂತೆ ಕಾದಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ಪ್ರೌಢಶಾಲೆಗಳಿಗೆ 1982ರಲ್ಲಿ ಮೂವರು ನಾಟಕ ಶಿಕ್ಷಕರ ನೇಮಕಾತಿ ಆದ ನಂತರ ಮತ್ತೆ 1984ರಲ್ಲಿ ಕೇವಲ ಇಬ್ಬರ ನೇಮಕವಾಗಿದೆ. ಬಳಿಕ 1986ರಲ್ಲಿ ಆರು ಮಂದಿಯನ್ನು ನೇಮಿಸಿಕೊಳ್ಳಲಾಗಿದೆ. ಇದಾದ ಮೇಲೆ 22 ವರ್ಷಗಳ ತರುವಾಯ 2008ರಲ್ಲಿ 63 ಹುದ್ದೆಗಳಿಗೆ ನೇಮಕಾತಿ ನಡೆದರೂ 43 ಹುದ್ದೆಗಳು ಮಾತ್ರ ಭರ್ತಿಯಾದವು. ಆ ನಂತರ ನಾಟಕ ಶಿಕ್ಷಕರ ನೇಮಕಾತಿ ನಡೆದೇ ಇಲ್ಲ.

ಪ್ರಸ್ತುತ ರಾಜ್ಯದ ಪ್ರೌಢಶಾಲೆಗಳಲ್ಲಿ ಕೇವಲ 54 ಮಂದಿ ನಾಟಕ ಶಿಕ್ಷಕರಿದ್ದು ಎಲ್ಲರೂ ರಂಗಭೂಮಿಯಲ್ಲಿ ನುರಿತವರೇ ಆಗಿದ್ದಾರೆ. ಇವರಿರುವ ಶಾಲೆಗಳು ಒಂದಲ್ಲಾ ಒಂದು ರೀತಿಯಲ್ಲಿ ಸಾಂಸ್ಕೃತಿಕವಾಗಿ ಕ್ರಿಯಾಶೀಲವಾಗಿದ್ದು, ಮಕ್ಕಳ ಸೃಜನಶೀಲ ಬೆಳವಣಿಗೆಗೆ ರಂಗಭೂಮಿಯನ್ನು ಸಶಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾಟಕ, ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ ವಿಚಾರಗಳ ಕೇಂದ್ರಗಳಾಗಿ ಶಾಲೆಗಳು ರೂಪುಗೊಳ್ಳಲು ನಾಟಕ ಶಿಕ್ಷಕರು ಶ್ರಮಿಸುತ್ತಿದ್ದಾರೆ. ನೃತ್ಯ-ನಾಟಕ-ರೂಪಕಗಳ ಮೂಲಕ ಮಕ್ಕಳ ತಾದಾತ್ಮ್ಯ ಹೆಚ್ಚಿ, ಅವರ ಗ್ರಹಣಶಕ್ತಿ ವೃದ್ಧಿಸುತ್ತದೆ. ಹೀಗಾಗಿ ಪ್ರೌಢಶಾಲೆಗಳಲ್ಲಿ ಹೆಚ್ಚು ಹೆಚ್ಚು ನಾಟಕ ಶಿಕ್ಷಕರನ್ನು ನೇಮಕ ಮಾಡಿಕೊಂಡು ರಂಗಕಲೆಯ ಮೂಲಕ ಮಕ್ಕಳ ಮನಸ್ಸನ್ನು ಅರಳಿಸುವ ಕೆಲಸವಾಗಬೇಕು ಎಂದು ಮನವಿ ಮಾಡುತ್ತೇನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.