ADVERTISEMENT

ನೇಮಕಾತಿ ವಿಳಂಬ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ಎರಡು ಸಾವಿರದ ಒಂಬತ್ತರ ಸೆಪ್ಟೆಂಬರ್‌ನಲ್ಲಿ ಆಗಿನ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿಯವರು ‘ರಾಜ್ಯದ ಆಯ್ದ 52 ಪಟ್ಟಣ ಪಂಚಾಯತಿಗಳನ್ನು ಪುರಸಭೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿದ್ದರು. ಈ ಕುರಿತಂತೆ 2010ರ ಬಜೆಟ್‌ಲ್ಲಿ ಅಧಿಕೃತವಾಗಿ ಪ್ರಕಟಿಸುವುದಾಗಿ    ಹೇಳಿದ್ದರು’.

ಹೊಸದಾಗಿ ರಚನೆಯಾಗಲಿರುವ ಪುರಸಭೆಗಳಿಂದ ನಗರಾಭಿವೃದ್ಧಿ ಇಲಾಖೆಯಲ್ಲಿ ಸೃಷ್ಟಿಯಾಗಲಿರುವ 190 ಪ್ರಥಮ ದರ್ಜೆ ಸಹಾಯಕರು ಸೇರಿದಂತೆ 676 ವಿವಿಧ ತಾಂತ್ರಿಕೇತರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಡಿಸೆಂಬರ್ 2009ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು.

ಇದಾದ  ಕೆಲವೇ ತಿಂಗಳುಗಳಲ್ಲಿ ಪರೀಕ್ಷಾರ್ಥಿಗಳ ಅಂಕಗಳಿಕೆ ಪಟ್ಟಿಯನ್ನು ಪ್ರಕಟಿಸಿ, ಮುಂದಿನ ನೇಮಕಾತಿ ಪ್ರಕ್ರಿಯೆಯನ್ನು          ‘ಪೌರಾಡಳಿತ ನಿರ್ದೇಶನಾಲಯ’ಕ್ಕೆ ವಹಿಸಿತ್ತು.

ಏಪ್ರಿಲ್ 2010 ರಿಂದ  ಈ ನಿರ್ದೇಶನಾಲಯವು ಪ್ರಥಮ ದರ್ಜೆ ಸಹಾಯಕ ಹುದ್ದೆಯ ಪೂರ್ಣ ಪ್ರಮಾಣದ ‘ಅಂತಿಮ ಆಯ್ಕೆ ಪಟ್ಟಿ’ಯನ್ನು ಪ್ರಕಟಿಸದೇ ವಿಳಂಬ ನೀತಿ ಅನುಸರಿಸುತ್ತಿದೆ.

ಈ ಬಗ್ಗೆ  ನಿರ್ದೇಶನಾಲಯವನ್ನು  ಸಂಪರ್ಕಿಸಿದರೆ ಸಕಾರಾತ್ಮಕ ಉತ್ತರ ಸಿಗುತ್ತಿಲ್ಲ. ಇದರಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ತೀವ್ರ   ನಿರಾಸೆಯಾಗಿದೆ.

2010 ರ ರಾಜ್ಯ ಬಜೆಟ್ ನಲ್ಲೇ ಉನ್ನತೀಕರಣಗೊಳ್ಳಬೇಕಾಗಿದ್ದ ಪಟ್ಟಣ ಪಂಚಾಯತಿಗಳು ಯಥಾ ಸ್ಥಿತಿಯಲ್ಲಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕುರಿತು ಮಂಡಿಸಲಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆಯ್ದ ನಗರ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಿ, ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಶೀಘ್ರಗತಿಯಲ್ಲಿ ನೇಮಕಾತಿ ಆದೇಶ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.