ADVERTISEMENT

ಪೊಲೀಸರೂ ಸೌಜನ್ಯವೂ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ಪೊಲೀಸ್ ವ್ಯವಸ್ಥೆಯ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳೇ ಹೆಚ್ಚು. ಆದರೆ ಮೊನ್ನೆ ನಡೆದ ಒಂದು ಘಟನೆಯು ಪೊಲೀಸರ ಬಗೆಗಿನ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳುವಂತೆ ಮಾಡಿತು. ಇದೇ ಏಪ್ರಿಲ್ 1ರ ರಾತ್ರಿ ಸುಮಾರು 10ರ ಹೊತ್ತಿಗೆ ನಮ್ಮ ಪಕ್ಕದ ಮನೆಯ ಮಹಿಳೆಯೊಬ್ಬರು ರಸ್ತೆಯಲ್ಲಿ ಮಾತನಾಡುತ್ತ ನಿಂತಿದ್ದಾಗ ಸರಗಳ್ಳನೊಬ್ಬ ಬೈಕ್‌ನಲ್ಲಿ ಬಂದು ಅವರ ಚಿನ್ನದ ಸರವನ್ನು ಕದಿಯಲು ವಿಫಲ ಯತ್ನ ಮಾಡಿದ. ಕತ್ತಿಗೆ ಕೈ ಹಾಕಿ ಸರವನ್ನು ತುಂಡು ಮಾಡಿ ತಪ್ಪಿಸಿಕೊಂಡು ಹೋದ.

ಈ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಲು 100 ನಂಬರಿಗೆ ನಾನು ದೂರವಾಣಿ ಕರೆ ಮಾಡಿದೆ. ಎರಡು ನಿಮಿಷಗಳಲ್ಲಿ ಬೆಂಗಳೂರಿನ ವಿಜಯನಗರ ಹೊಯ್ಸಳ ಪೊಲೀಸರಿಂದ ಕರೆ ಬಂತು. 7–8 ನಿಮಿಷಗಳಲ್ಲಿ ಅವರು ಸ್ಥಳಕ್ಕೆ ಬಂದು ಘಟನೆಯ ಬಗ್ಗೆ ಪೂರ್ಣ ವಿವರ ಪಡೆದರು. ಈ ಮಧ್ಯೆ, 100 ನಂಬರಿಗೆ ಕರೆ ಮಾಡಿದ್ದಕ್ಕಾಗಿ ಸರ್ವಿಸ್ ಐ.ಡಿ, ಯಾವ ನಂಬರಿನ ಹೊಯ್ಸಳ ವಾಹನ ಬರಲಿದೆ ಎಂದೆಲ್ಲ ಎಸ್‌ಎಂಎಸ್ ಮೆಸೇಜ್ ಮೂಲಕ ತಿಳಿಸಲಾಯಿತು. ಐದು ನಿಮಿಷದಲ್ಲಿ ಇನ್‌ಸ್ಪೆಕ್ಟರ್ ಕೂಡ ಸ್ಥಳಕ್ಕೆ ಬಂದು ಪೂರ್ಣ ವಿವರ ಪಡೆದರು.

ಇನ್‌ಸ್ಪೆಕ್ಟರ್ ಬಳಿ ಈ ಕೃತ್ಯದ ಬಗ್ಗೆ ಅಷ್ಟೇ ಅಲ್ಲ, ತಮ್ಮ ಸಮಸ್ತ ಸಮಸ್ಯೆಗಳನ್ನೂ ಜನ ಹೇಳಿಕೊಳ್ಳತೊಡಗಿದರು. ‘ಹೊಯ್ಸಳ’ದವರು ಇರಬೇಕಾದಲ್ಲಿ ಇರದೇ ಎಲ್ಲೆಲ್ಲೋ ಇರುತ್ತಾರೆಂದೂ, ಪೊಲೀಸರು ತಮ್ಮ ಕರ್ತವ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ ಎಂದೂ ಏರು ಧ್ವನಿಯಲ್ಲಿ ದೂರು ಹೇಳಿದರು. ಜನರ ಮಾತಿನ ಧಾಟಿಗೆ ಇನ್‌ಸ್ಪೆಕ್ಟರ್ ತಾಳ್ಮೆ ಕಳೆದುಕೊಳ್ಳಬಹುದಿತ್ತು. ಆದರೆ, ಎಲ್ಲವನ್ನೂ ಅವರು ತಾಳ್ಮೆಯಿಂದ ಕೇಳಿಸಿಕೊಂಡರು. ಹೊಯ್ಸಳ ಪಡೆಯ ಕರ್ತವ್ಯ–ನಿಬಂಧನೆಗಳನ್ನು ತಿಳಿಹೇಳಿದರು. ಸೌಜನ್ಯದಿಂದ ವರ್ತಿಸಿದರು.

ADVERTISEMENT

ಅಷ್ಟೇ ಅಲ್ಲ, ದೂರು ಕೊಟ್ಟ ಒಂದು ಗಂಟೆಯ ನಂತರ ಪೊಲೀಸ್ ಕಂಟ್ರೋಲ್ ರೂಮ್‌ನಿಂದ ಕರೆ ಮಾಡಿ, ‘ಹೊಯ್ಸಳ ಸರಿಯಾದ ಸಮಯಕ್ಕೆ ಬಂದಿತೇ, ಕಂಪ್ಲೆಂಟ್ ಪಡೆಯಲಾಯಿತೇ’ ಎಂದು ವಿಚಾರಿಸಿದರು. ಎಲ್ಲ ಪೊಲೀಸರು ಇದೇ ರೀತಿ ನಡೆದುಕೊಂಡರೆ ಅವರ ಬಗ್ಗೆ ಇರುವ ‘ಕಹಿ’ಯೆಲ್ಲ ತಾನಾಗಿಯೇ ಕರಗಿಹೋಗುತ್ತದೆ.

ಅನಿಲ್ ಚನ್ನೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.