ADVERTISEMENT

ಪ್ರಕಾಶ್‌ ತಿಳಿಯಬೇಕಾದದ್ದು

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST

ನಟ ಪ್ರಕಾಶ್‌ ರೈ ಅವರು ಇತ್ತೀಚೆಗೆ ಹಿಂದುತ್ವದ ಆಧಾರದಲ್ಲಿ ಮತ ಯಾಚಿಸಿದ ಮಹಿಳೆಯೊಬ್ಬರನ್ನು ಟೀಕಿಸಿ ಮಾತನಾಡಿರುವ ವಿಡಿಯೊ ಒಂದು ವೈರಲ್‌ ಆಗಿದೆ.  ಹೋದಲ್ಲೆಲ್ಲ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಲೇ ಇದ್ದಾರೆ. ಆದರೆ ಪ್ರಕಾಶ್‌ ಅವರು ಅರಿಯಬೇಕಾದ ಕೆಲವು ವಿಚಾರಗಳೂ ಇವೆ.

ಸ್ವಾತಂತ್ರ್ಯಾನಂತರ ದೀರ್ಘ ಕಾಲದವರೆಗೆ ನಮ್ಮನ್ನು ಆಳಿದ ಕಾಂಗ್ರೆಸ್ ಪಕ್ಷವನ್ನು ದೇಶದ ಜನರೇ ಸೋಲಿಸಿ, ಬಿಜೆಪಿಯನ್ನು ಆಯ್ಕೆ ಮಾಡಿಕೊಂಡರು. ಒಳ್ಳೆಯ ವಿಚಾರಗಳು ಉಳಿದೇ ಉಳಿಯುತ್ತವೆ. ಇದು ಪ್ರಕೃತಿಗೆ ಹೇಗೋ ಹಾಗೇ ಸಮಾಜಕ್ಕೂ ಅನ್ವಯವಾಗುತ್ತದೆ. ಜನರು ಹೊಸ ವ್ಯವಸ್ಥೆ ಆಯ್ಕೆ ಮಾಡಿಕೊಂಡರು ಎಂದರೆ ಈ ತನಕ ಇದ್ದದ್ದು ಸಮರ್ಪಕವಾಗಿರಲಿಲ್ಲ ಎಂದೇ ಅರ್ಥ. ‘ಭಾರತೀಯ ಮತದಾರರು ಮೂರ್ಖರಲ್ಲ’ ಎಂದು ಪ್ರಕಾಶ್‌ ಅವರೇ ಒಂದು ಭಾಷಣದಲ್ಲಿ ಉಲ್ಲೇಖಿಸಿದ್ದರು. ಅದು ಸತ್ಯವೂ ಹೌದು. ಹೀಗಿರುವಾಗ ಜನರೇ ಆಯ್ಕೆ ಮಾಡಿದ ಒಬ್ಬ ಪ್ರತಿನಿಧಿಯನ್ನು (ಪ್ರಧಾನಿಯನ್ನು)
ತುಚ್ಛೀಕರಿಸುವುದೆಂದರೆ ಇಡೀ ದೇಶದ ಜನರಿಗೆ ಮಾಡಿದ ಅಪಮಾನವಲ್ಲವೇ?

‘ಬಿಜೆಪಿ ಸಿದ್ಧಾಂತಗಳೆಲ್ಲವೂ ಆರ್‌ಎಸ್‌ಎಸ್‌ನಿಂದ ಬಂದವುಗಳು’ ಎಂದು ಪ್ರಕಾಶ್‌ ಹೇಳಿದ್ದಾರೆ. ಎಲ್ಲಾ ಪಕ್ಷಗಳಿಗೂ ಸೈದ್ಧಾಂತಿಕ ಮಾತೃಕೆಗಳೂ ಆಕರಗಳೂ ಬೇರೆಡೆಯಿಂದಲೇ ಲಭ್ಯವಾಗಿರುವುದನ್ನು ಪ್ರಕಾಶ್‌ ಮರೆತಂತಿದೆ. ಯಾವುದೇ ಧ್ಯೇಯೋದ್ದೇಶಗಳಿಲ್ಲದ, ಸಿದ್ಧಾಂತಗಳಿಲ್ಲದ ಪಕ್ಷವೊಂದನ್ನು
ಚುನಾಯಿಸಿ ಕಳುಹಿಸುವ ಬೌದ್ಧಿಕ ದಿವಾಳಿತನ ನಮ್ಮ ದೇಶದ ಜನರಿಗೆ ಇನ್ನೂ ಬಂದಿಲ್ಲವೆಂದು ಅವರು ತಿಳಿದುಕೊಳ್ಳಬೇಕು.

ADVERTISEMENT

ಎಡ– ಬಲ ಎಂಬುದು ರಾಜಕೀಯದಲ್ಲಿ ಇದ್ದದ್ದೇ. ಎಡಕ್ಕೆ ಪರಂಪರೆಯ ಪ್ರಜ್ಞೆಯ ಕೊರತೆ ಇದ್ದರೆ, ಬಲಕ್ಕೆ ಕೆಲ ಅಂಧಾಭಿಮಾನಗಳಿವೆ. ನಡುವಿನದೊಂದು ಸುಂದರ ಮಾರ್ಗವಿದೆ. ಯಾವುದೂ ಅತಿಯಾದರೆ ವಿಷವೇ. ರಾಜಕೀಯ ಪಕ್ಷಗಳಿಗೆ ಕೆಲ ಇತಿಮಿತಿಗಳಿರುತ್ತವೆ. ಅದನ್ನು ಉಪೇಕ್ಷಿಸಿ ದೇಶ ಕಟ್ಟುವ ಕಾಯಕಕ್ಕೆ ನೆರವಾಗಬೇಕಾದ್ದು ಪ್ರಜ್ಞಾವಂತ ನಾಗರಿಕರ ಕರ್ತವ್ಯವೇ ವಿನಾ ಅವರ ಸಣ್ಣಪುಟ್ಟ ತಪ್ಪುಗಳನ್ನು ಎತ್ತಾಡುತ್ತಾ ಶಾಂತಿ ಕದಡುವುದಲ್ಲ. ಇಷ್ಟೆಲ್ಲವನ್ನೂ ಪ್ರಕಾಶ್‌ ಮೇಲಿನ ಅಭಿಮಾನದಿಂದಲೇ ಬರೆದಿರುವೆ. ಅವರು ಕನ್ನಡಿಗರು, ನಮ್ಮವರು. ಸೈದ್ಧಾಂತಿಕ ವ್ಯತ್ಯಾಸಗಳಿಂದ ಯಾರೂ ಅನ್ಯರಾಗುವುದಿಲ್ಲ.

-ಉಷಾ ನರಸಿಂಹನ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.