ADVERTISEMENT

ಪ್ರತಿಮಾಗೃಹ ಸ್ಥಾಪಿಸಿ

ಎನ್.ನರಹರಿ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST

ಇತ್ತೀಚೆಗೆ ದೇಶದ ಒಂದಲ್ಲ ಒಂದು ಕಡೆ ‘ಪ್ರತಿಮಾಭಂಗ’ ಎಗ್ಗಿಲ್ಲದೆ ನಡೆಯುತ್ತಿದೆ. ಇಂಥ ಕೃತ್ಯ ಸಂಭವಿಸಿದ ಬಳಿಕ ಅದಕ್ಕೆ ಸಂಬಂಧಿಸಿದ ಅಭಿಮಾನಿಗಳು, ಅನುಯಾಯಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುವುದರಿಂದ ಜನರಿಗೆ ವಿಪರೀತ ತೊಂದರೆಯಾಗುತ್ತಿದೆ.

ಭಗ್ನ ಪ್ರತಿಮೆಗಳ ಸ್ಥಾನದಲ್ಲಿ ಹೊಸ ಪ್ರತಿಮೆಯನ್ನು ಸ್ಥಾಪಿಸಿ ಸರ್ಕಾರಗಳು ಸಮಾಧಾನ ಹೇಳುತ್ತಿವೆ. ಆದರೆ ಒಂದಲ್ಲ ಒಂದು ದಿನ ಈ ಸಮಸ್ಯೆ ಪುನರಾವರ್ತನೆ ಆಗುವುದು ಸತ್ಯಸ್ಯ ಸತ್ಯ. ಹಾಗಾಗಿ ಈ ಕುರಿತು ನನ್ನದೊಂದು ಸಲಹೆ:

ಸಂಸ್ಕೃತ ನಾಟಕಕಾರ ಭಾಸನ ‘ಪ್ರತಿಮಾನಾಟಕಂ’ ನಲ್ಲಿ ಪ್ರತಿಮಾಗೃಹವೊಂದರ ಪ್ರಸಂಗವಿದೆ. ಆ ಗೃಹದಲ್ಲಿ ಅಯೋಧ್ಯೆಯನ್ನು ಆಳಿ ಅಳಿದ ಮಹಾರಾಜರ ಪ್ರತಿಮೆಗಳನ್ನು ಸ್ಥಾಪಿಸಿ, ಹೆಸರು ಮತ್ತು ಇತರ ವಿವರಗಳ ಫಲಕಗಳನ್ನು ನೇತುಹಾಕಿರುತ್ತಾರೆ. ಅವು ಹಾಳಾಗದೆ ಗೌರವಕ್ಕೆ ಸದಾ ಪಾತ್ರವಾಗಿರುತ್ತವೆ. ಈ ರೀತಿಯಲ್ಲೇ ಈ ದೇಶದ ಪ್ರತಿ ರಾಜ್ಯವೂ ತನ್ನ ಅಧೀನದ ಕೃಷಿರಹಿತ ಭೂಪ್ರದೇಶದಲ್ಲಿ ಒಳಾಂಗಣ ಕ್ರೀಡಾಂಗಣದ ಮಾದರಿಯಲ್ಲಿ ‘ಪ್ರತಿಮಾಗೃಹ’ಗಳನ್ನು ನಿರ್ಮಿಸಿ, ಎಲ್ಲ ಪ್ರತಿಮೆಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು.

ADVERTISEMENT

ಮುಂದಿನ ದಿನಗಳಲ್ಲಿ ಸ್ಥಾಪಿಸ ಬಯಸುವ ಪ್ರತಿಮೆಗಳನ್ನು ನೇರವಾಗಿ ಅಲ್ಲಿಯೇ ಸ್ಥಾಪಿಸಿದರೆ ಅದೊಂದು ಪ್ರವಾಸಿ ತಾಣವಾಗಿ ಸರ್ಕಾರಕ್ಕೆ ವರಮಾನವೂ ಬಂದೀತು. ಮುಖ್ಯವಾಗಿ ಪ್ರತಿಮೆಗಳ ಮೂಲಕ ಮಹಾನ್‌ ವ್ಯಕ್ತಿಗಳಿಗೆ ಆಗುತ್ತಿರುವ ಅವಮಾನ ತಪ್ಪುತ್ತದೆ. ಸಾಮಾಜಿಕ ಸಾಮರಸ್ಯ ಏರ್ಪಡುತ್ತದೆ. ದೇಶ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.