ADVERTISEMENT

ಬಿ.ಡಿ.ಎ. ತಪ್ಪಿಗೆ ಸಾರ್ವಜನಿಕರಿಗೆ ಶಿಕ್ಷೆ!

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬೆಂಗಳೂರು ವಿವಿಧ ಬಡಾವಣೆಗಳಲ್ಲಿ ನಿವೇಶನ ಪಡೆದ ಅನೇಕರು ತಮ್ಮ ನಿವೇಶನದ ಮೇಲೆ ಕಾಲಿಡಲೂ ಸಾಧ್ಯವಾಗುತ್ತಿಲ್ಲ. ಸಾಲವನ್ನು ಪಡೆಯಲೂ ಆಗುತ್ತಿಲ್ಲ. ಇನ್ನು ಕಟ್ಟಡ ಕಟ್ಟುವುದು ಕನಸೇ ಸರಿ.

ಬಿ.ಡಿ.ಎ.ಯ ಕಾನೂನು ಇಲಾಖೆಯಲ್ಲಿನ ವೈಫಲ್ಯವೇ ಇದಕ್ಕೆ ಕಾರಣ. ತಾನು ಸ್ವಾಧೀನಪಡಿಸಿಕೊಂಡ ಕೆಲವು ಜಮೀನಿನ ವಿಷಯದಲ್ಲಿ ಅಲ್ಲಿನ ರೈತರು, ಮಾಲೀಕರು ತಕರಾರಿನ ಕಾರಣಕ್ಕೆ ಮೊಕದ್ದಮೆ ಹೂಡಿದ್ದಾರೆ. ಅದರ ಅರಿವಿದ್ದೂ ಬಿ.ಡಿ.ಎ. ಅಧಿಕಾರಿಗಳು ಅಂತಹ ಸರ್ವೆ ನಂಬರಿನ ನಿವೇಶನಗಳನ್ನು ನಾಗರಿಕರಿಗೆ ಮಂಜೂರು ಮಾಡಿದ್ದಾರೆ. ಈ ನಿವೇಶನಗಳನ್ನು ಕೊಂಡವರು ಆಮೇಲೆ ಪೀಕಲಾಟಕ್ಕೆ ಸಿಲುಕಿದ್ದಾರೆ.
ಬಿ.ಡಿ.ಎ. ತನ್ನ ಪಾಲಿನ ಹಣವನ್ನು ಸಂಪೂರ್ಣವಾಗಿ ಪಾವತಿಸಿಕೊಂಡು ನೋಂದಣಿಯನ್ನೂ ಮಾಡಿಕೊಟ್ಟಿದೆ.

 ಸಾರ್ವಜನಿಕರಿಗೆ ತಾವು ಕೊಂಡ ನಿವೇಶನ ತಕರಾರಿನದ್ದು ಎಂದು ಗೊತ್ತಾದ ಮೇಲೆ ಗೊಂದಲ ಶುರುವಾಗುತ್ತದೆ. ಹತ್ತಾರು ವರ್ಷಗಳಾದ ಮೇಲೆ ನಿವೇಶನ ಪಡೆದವರ ಗತಿ ಹೀಗಾದರೆ, ಅವರು ಕೈ ಸಾಲ, ಇಲ್ಲವೇ ಬ್ಯಾಂಕಿನ ಸಾಲವನ್ನು ತೀರಿಸುವುದಾದರೂ ಹೇಗೆ? ನಿವೇಶನ ಪತ್ರ ಮತ್ತು ಶುದ್ಧ ಕ್ರಯಪತ್ರವಷ್ಟನ್ನೇ ಇಟ್ಟುಕೊಂಡು ಅವರು ಹೋರಾಡುವುದಾದರೂ ಹೇಗೆ?

ಎಲ್ಲ ಬಡಾವಣೆಗಳಲ್ಲಿ ಇಂತಹ ತಕರಾರುಗಳಿರುವ ನಿವೇಶನಗಳ ಪಟ್ಟಿ ಮಾಡಿ  ಬಿ.ಡಿ.ಎ. ವಿಂಗಡಣೆಯಾಗಿರುವ ನಿವೇಶನ ಮಾಲೀಕರಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು. ರಾಜಕೀಯ ಪ್ರಭಾವ ಇರುವವರು ಇಲ್ಲವೇ ಹಣದ ಪ್ರಭಾವ ಇರುವವರು ಬದಲಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ.

ಧ್ವನಿ ಇಲ್ಲದವರು ಬಿ.ಡಿ.ಎ. ಅಧಿಕಾರಿಗಳು ಹೇಳುವ ಮಾತುಗಳನ್ನು ಕೇಳುತ್ತ ತಮ್ಮ ಆಯುಷ್ಯವನ್ನು ಕಳೆಯುತ್ತಿದ್ದಾರೆ. ಬಿ.ಡಿ.ಎ. ಅಧಿಕಾರಿಗಳು ಕೂಡಲೇ ಇಂತಹ ನಿವೇಶನದ ಮಾಲೀಕರ ಬಗ್ಗೆ ತುರ್ತು ಕ್ರಮವನ್ನು ಕೈಗೊಳ್ಳಲೇಬೇಕು.
-ಕೆ.ಎಸ್. ನಾಗರಾಜ

ಅಕ್ರಮ ಸಂಪರ್ಕ ತೆಗೆಯಿರಿ
ಬೃಹತ್ ಬೆಂಗಳೂರು ಮಹಾನಗರಪಾಲಿಕೆ ರಾಜರಾಜೇಶ್ವರಿ ನಗರ ವಲಯದ ವಾರ್ಡ್ ನಂ. 73ರ ಚೌಡೇಶ್ವರಿನಗರ ಸೇರಿದಂತೆ 3-4 ಬಡಾವಣೆಗಳ ನಿವೇಶನದಾರರು ಕುಡಿಯಲು ಕಾವೇರಿ ನೀರಿನ ಸಂಪರ್ಕವನ್ನು ಪಡೆಯಲು ಬೆಂಗಳೂರು ಜಲಮಂಡಳಿಗೆ ಹಣ ಪಾವತಿಸಿ ಎರಡು ವರ್ಷಗಳಿಂದಲೂ ಕಾಯುತ್ತಿದ್ದಾರೆ.

ಆದರೆ ಚೌಡೇಶ್ವರಿ ನಗರದಲ್ಲಿನ 20ಕ್ಕೂ ಹೆಚ್ಚು ಬೋರ್‌ವೆಲ್‌ಗಳ ನೀರು ಪ್ರಭಾವಶಾಲಿ ವ್ಯಕ್ತಿಗಳ ಮನೆ ತೊಟ್ಟಿಯನ್ನು ತುಂಬಿ ಉಳಿದರೆ ಮಾತ್ರ ಬೀದಿ ಕೊಳಾಯಿಗಳಲ್ಲಿ ಪ್ರತ್ಯಕ್ಷವಾಗುತ್ತದೆ. ಈ ಪಕ್ಷಪಾತ ಯಾಕೆ? ಬೆಂಗಳೂರು ಜಲಮಂಡಳಿಯ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳಾಗಲೀ ಈ ಬಗ್ಗೆ ಸೂಕ್ತ ಗಮನಹರಿಸಿ.

ಇಲ್ಲಿನ ಅಕ್ರಮ ಕೊಳಾಯಿ ಸಂಪರ್ಕ ತೆಗೆದುಹಾಕಿ. ಕೊನೇ ಪಕ್ಷ ಬೀದಿ ಕೊಳಾಯಿಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಹರಿಯುವಂತೆ ಮಾಡುತ್ತಾರೆಂದು ಆಶಿಸೋಣವೇ?
-ಜಿ. ಸಿದ್ದಗಂಗಯ್ಯ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.