ADVERTISEMENT

ಬೇಸಿಗೆಯಲ್ಲಿ ಕಚೇರಿ ವೇಳೆ ಬದಲಾಗದಿರಲಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST

ಪ್ರತಿವರ್ಷ ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಬಿರುಬೇಸಿಗೆ ಎಂಬ ಕಾರಣ ನೀಡಿ ಯಾದಗಿರಿ ಸೇರಿದಂತೆ ಗುಲ್ಬರ್ಗ ವಿಭಾಗದ ಆರು ಜಿಲ್ಲೆಗಳಿಗೆ ಮಾತ್ರ ರಾಜ್ಯ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಮಿತಿಗೊಳಿಸುವ ಅನಿಷ್ಟ ಪದ್ಧತಿ ಹಲವು ವರ್ಷಗಳಿಂದ ಮುಂದುವರೆಯುತ್ತಿದೆ.

ಯಾರಿಗೂ ಇಲ್ಲದ ಬೇಸಿಗೆ ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದೆಯೇ? ಬೇಸಿಗೆ ಬಿಸಿಲು ಹೊಲಗದ್ದೆಗಳಲ್ಲಿ ಮೈಗೆ ಬಟ್ಟೆ ಇಲ್ಲದೇ ದುಡಿದು ಬೆವರಿಳಿಸಿಕೊಳ್ಳುವ ರೈತರು, ಕೃಷಿ ಕಾರ್ಮಿಕರು, ಕಂಕುಳಲ್ಲಿ ಹಸುಗೂಸುಗಳನ್ನು ಜೋತುಬಿಟ್ಟುಕೊಂಡ ಮಹಿಳಾ ಕಾರ್ಮಿಕರನ್ನು ಬಾಧಿಸುವುದಿಲ್ಲವೇ? ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳು, ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕ್‌ಗಳು, ಸಾರಿಗೆ ಸಂಸ್ಥೆಗಳು, ಖಾಸಗಿ ವಲಯಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ನೌಕರರಿಗೆ ಬೇಸಿಗೆ ಬಿಸಿಲು ತಾಗುವುದಿಲ್ಲವೆ? 

ಈ ಎರಡು ತಿಂಗಳುಗಳು ರಾಜ್ಯ ಸರ್ಕಾರಿ ನೌಕರರಿಗಂತೂ ಸುಖ! ‘ಕಚೇರಿಗೆ ಬರುವುದು ತಡವಾಗಿ, ಮನೆಗೆ ಹೋಗುವುದು ಬೇಗನೆ’ ಎಂಬ ರೂಢಿ ಸಾಮಾನ್ಯ ಸಂಗತಿ. ದೂರದ ಹಳ್ಳಿಗಳಿಂದ ಜನರು ಕೆಲಸ ಕಾರ್ಯಗಳಿಗೆ ಬಸ್ಸು, ಟಂಟಂ ಹಿಡಿದು ಸರ್ಕಾರಿ ಕಚೇರಿಗಳಿಗೆ ಬರುವುದರೊಳಗೆ ನೌಕರರು ಜಾಗ ಖಾಲಿ ಮಾಡಿರುತ್ತಾರೆ. ಹಾಗಾಗಿ ಕೆಲಸ ಆಗದೆ ಜನರು ನಿರಾಶರಾಗಿ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಂಡು ಹೋಗುತ್ತಾರೆ. ಸರ್ಕಾರಿ ಕಚೇರಿಗಳು ಇರುವುದು ಜನರಿಗಾಗಿಯೋ ಅಥವಾ ನೌಕರರ ಹಿತಕ್ಕಾಗಿಯೋ ಎನ್ನುವುದನ್ನು  ಸರ್ಕಾರ ಸ್ಪಷ್ಟಪಡಿಸಬೇಕಿದೆ. ಜನರಿಗೆ ತೊಂದರೆ ಆಗುವ ಈ ಪದ್ಧತಿಯನ್ನು ರಾಜ್ಯ ಸರ್ಕಾರ ಈಗಲಾದರೂ ರದ್ದು ಮಾಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.