ADVERTISEMENT

ಭೇಷ್ ಹೊರಟ್ಟಿಯವರೇ!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST

ಜೀವಂತ ಮನುಷ್ಯರನ್ನು ಮನುಷ್ಯರು ಹೊರುವುದೆಂದರೆ ಭಯಂಕರ ಅಪಮಾನ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಅಸಂಗತ ಪ್ರಹಸನ. ಪ್ರಸ್ತುತ ಬಸವರಾಜ ಹೊರಟ್ಟಿಯವರು ಧೈರ್ಯತಾಳಿ ಪಂಚಾಚಾರ್ಯ ಮಠಾಧೀಶರಿಗೆ, ‘ನಾವು ನಿಮ್ಮನ್ನು ಹೊರುವುದಿಲ್ಲ’ (ಪ್ರ.ವಾ., ಆಗಸ್ಟ್ 21) ಎಂದು ಹೇಳುವ ಮೂಲಕ ಶತಮಾನಗಳ ಮೌಢ್ಯವನ್ನು ಕೊಡವಿ ಎಸೆದಿದ್ದಾರೆ. ಅವರು ಅಭಿನಂದನೀಯರು.

ಇಲ್ಲಿ ನನಗೊಂದು ಘಟನೆ ನೆನಪಾಗುತ್ತದೆ. 1970ರ ದಶಕ. ನಾನಾಗ ಕೊಳ್ಳೇಗಾಲದ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದೆ. ಆ ಊರಿನ ಸಂಪ್ರದಾಯದಂತೆ, ದೇವರ ಪಲ್ಲಕ್ಕಿಯನ್ನು ದಲಿತರು ಹೊರುತ್ತಿದ್ದರು, ಪೂಜಾರಿಗಳು ಹಿಂದೆ ಘಂಟೆ ಬಾರಿಸುತ್ತ ಮಂಗಳಾರತಿ ನೀಡುತ್ತಿದ್ದರು. ಒಮ್ಮೆ ಹೀಗಾಯಿತು: ದಲಿತರು, ‘ನಾವು ಪಲ್ಲಕ್ಕಿ ಹೊರುವುದಿಲ್ಲ; ನೀವೇ ಬೇಕಾದರೆ ಪಲ್ಲಕ್ಕಿ ಹೊರಿ; ನಾವು ಮಂಗಳಾರತಿ ಮಾಡುತ್ತೇವೆ’ ಎಂದರು. ದೊಡ್ಡ ಗಲಾಟೆಯಾಯಿತು. ಪೊಲೀಸರು ಬಂದರು. ಕಡೆಗೆ ದೇವರು ತೆರೆದ ಜೀಪಿನಲ್ಲಿ ಮೆರವಣಿಗೆ ಹೊರಟಿತು. ಪೂಜಾರಿಗಳು ಸೀಟಿನಲ್ಲಿ ಕುಳಿತು ಮಂಗಳಾರತಿ ನೀಡುತ್ತಿದ್ದರು. ಪ್ರಳಯವೇನೂ ಸಂಭವಿಸಲಿಲ್ಲ. ಕಾಲಾಯ ತಸ್ಮೈ ನಮಃ!

ಇನ್ನೊಂದು ಮಾತು. ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟ. ಪ್ರಸ್ತುತ ಲಿಂಗಾಯತ ಧರ್ಮ ಸ್ವತಂತ್ರ ಎಂದ ಕೂಡಲೇ ನಮ್ಮ ಯುಗ ಯಾತ್ರೀ ಭಾರತೀಯ ಸಂಸ್ಕೃತಿಗೆ ಯಾವ ಧಕ್ಕೆಯೂ ಉಂಟಾಗಲಾರದು. ಮುಖ್ಯ ನಮಗೆ ಸಹಿಷ್ಣುತೆ ಬೇಕು.

ADVERTISEMENT

-ಪ್ರೊ.ಶಿವರಾಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.