ADVERTISEMENT

ಮನಸ್ಸಲ್ಲೇ ಭಯೋತ್ಪಾದನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2010, 9:40 IST
Last Updated 22 ಡಿಸೆಂಬರ್ 2010, 9:40 IST

ಹಿಂದೂ ಮೂಲಭೂತವಾದ ಹೆಚ್ಚು ಅಪಾಯಕಾರಿ ಎಂದು ರಾಹುಲ್‌ಗಾಂಧಿ ಅಮೆರಿಕದ ರಾಯಭಾರಿಯ ಜೊತೆಗೆ ಚರ್ಚಿಸಿದರೆಂಬ ಸಂಗತಿ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಮಾತನ್ನು ಅವರು ಹೊರಗಿನ ವ್ಯಕ್ತಿಗೆ ಯಾಕೆ, ಬಹಿರಂಗವಾಗಿಯೆ ಹೇಳಬಹುದಿತ್ತು. ಇದು ರಹಸ್ಯ ಸಂಗತಿ ಏನೂ ಅಲ್ಲ.

ಈ ದೇಶ, ಈ ಜನ ಒಡೆದು ಛಿದ್ರ ಛಿದ್ರವಾಗಿ ಯೋಚಿಸುತ್ತಿರುವುದಕ್ಕೆ ಮತ್ತು ಕೇರಿ ಒಳಗೆ, ಹೊರಗೆ ಬದುಕುತ್ತಿರುವುದಕ್ಕೆ ಆಂತರಿಕ ಹಿಂದೂ ಮೂಲಭೂತವಾದವೆ ಕಾರಣ. ಅದು ನಿಜಕ್ಕೂ ಮುಸ್ಲಿಮೇತರ ಜನರ ಸಾಂಘಿಕತೆ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರತಿನಿಧಿಸುತ್ತಿದ್ದಲ್ಲಿ ಅದರ ಗಮ್ಮತ್ತೇ ಬೇರೆ ಇರುತ್ತಿತ್ತು. ಭಾರತಕ್ಕೆ ಒಂದು ಸದೃಢತೆ ಬರುತ್ತಿತ್ತು. ಭಾರತದ ಭವಿಷ್ಯ ಉಜ್ವಲವಾಗಿರುತ್ತಿತ್ತು.

ಬಹುತೇಕ ವಿಚಾರವಂತರು ಹಿಂದೂ ಮೂಲಭೂತವಾದಿಗಳ ಜೊತೆಗೆ ತಕರಾರು ಎತ್ತುವುದು ಈ ಸೌಹಾರ್ದ ಬದುಕನ್ನು ಬಯಸಿ ಪಾಪ! ತಲೆಯಲ್ಲಿ ಗೊಬ್ಬರ ಇಟ್ಟುಕೊಂಡು ಅದನ್ನು ಬೆಳೆ ಬೆಳಸಲು ಬಳಸಲು ಗೊತ್ತಿಲ್ಲದ ತಿಳಿಗೇಡಿಗಳಿಗೆ ಇದು ಅರ್ಥವಾಗುವುದಾದರೂ ಹೇಗೆ? ಈ ಹಿಂದೂ ಮೂಲಭೂತವಾದಿಗಳು ಬ್ರಾಹ್ಮಣರೂ ಅಲ್ಲ; ಶೂದ್ರರೂ ಅಲ್ಲ. ಅವರ ಹೆಸರಿನಲ್ಲಿ ಕಸುಬು ಮಾಡುತ್ತಿರುವ ಡ್ಯಾಶ್‌ಗಳು.

ಭಾರತದ ಸದೃಢತೆಯನ್ನು ಅಪೇಕ್ಷಿಸಿ ರಾಹುಲ್‌ಗಾಂಧಿ ‘ಹಿಂದೂ ಮೂಲಭೂತವಾದ ಹೆಚ್ಚು ಅಪಾಯಕಾರಿ’ ಎಂದು ಹೇಳಿದ್ದಲ್ಲಿ ಆತ ನಿಜವಾದ ಭವಿಷ್ಯವಾದಿ ರಾಷ್ಟ್ರನಾಯಕ, ನಿಯತ್ತಿನ ಆಧುನಿಕ ಯುವಕ. ಭಾರತದ ಯುವ ಮನಸ್ಸುಗಳು ಅವನನ್ನು ಅನುಸರಿಸಬೇಕು. ಇಲ್ಲದಿದ್ದಲ್ಲಿ ಪುರಾತನ ಗೊಬ್ಬರ ಗುಂಡಿಗೆ ಬೀಳುವುದು ಖಂಡಿತ. ಆಧುನಿಕ ಸೌಲಭ್ಯಗಳನ್ನು ಎಗ್ಗಿಲ್ಲದೆ ಅನುಭವಿಸುತ್ತ ಆದರೆ ಅದರಿಂದ ಉತ್ಪನ್ನವಾದ ವೈಜ್ಞಾನಿಕ ಮನೋಧರ್ಮವನ್ನು ನಿರಾಕರಿಸುವ ಧರ್ಮವನ್ನು ಬೋಧಿಸುತ್ತ ಯುವ ಪೀಳಿಗೆಯನ್ನು ಪ್ರಪಾತಕ್ಕೆ ತಳ್ಳಲು ಹೊರಟಿರುವ ಭಯೋತ್ಪಾದಕರ ಬಗ್ಗೆ ಎಚ್ಚರವಿರಲಿ!

ಲೋಕಜ್ಞಾನ ಇರುವವರಿಗೆಲ್ಲ ಗೊತ್ತು ಈ ಹೊತ್ತಿನ ಮುಸ್ಲಿಂ ಭಯೋತ್ಪಾದನೆ ತಾತ್ಕಾಲಿಕ ಉನ್ಮಾದ ಎಂದು. ಅದರ ಉತ್ಪಾದಕರು ಮತ್ತು ಪ್ರಚೋದಕರು ಯಾರು ಎಂಬುದು ರಹಸ್ಯವೇನಲ್ಲ. ಮುಸ್ಲಿಂ ಭಯೋತ್ಪಾದಕರು ಅಧರ್ಮವೆಂಬ ಹೆಂಡವನ್ನು ಕುಡಿದ ಕೋತಿಗಳು. ಆಯುಧ ಸಪ್ಲೆ ಆಗುವವರೆಗೆ ಅವು ಹೀರೋಗಳು ಆಮೇಲೆ ಜೀರೋಗಳು.

ಒಬ್ಬ ಮತ್ತೊಬ್ಬನನ್ನು ಸೇರದ, ಸಮಾನವಾಗಿ ನೋಡದ, ಭಾಗವಹಿಸದ, ಊಟ ಮಾಡದ, ನಾವು ತಿಂದು ಬಿಸಾಡಿದ ಎಂಜಲೆಲೆಯ ಮೇಲೆ ಹೊರಳಾಡಿ ಆರೋಗ್ಯ ಪಡೆಯಿರಿ ಎಂಬ ನಿರಂತರ ಮಾನಸಿಕ ಭಯೋತ್ಪಾದನೆಗೆ ಕೊನೆ ಎಂದು? ದೂರ ಇಡುವ ನರಕ, ದೂರ ಇರಿಸಿಕೊಂಡವನಿಗೇ ಗೊತ್ತು.

ಅಪಾಯದ ಶತ್ರು ಯಾಹೊತ್ತೂ ಒಳಗಿನವನೆ, ಅದು ದೇಹದೊಳಗಿನ ರೋಗ ಅಥವಾ ದೇಶದೊಳಗಿನ ಭಯೋತ್ಪಾದಕ ಇರಬಹುದು. ಇವನು ಧರ್ಮವನ್ನೆಂದೂ ಉತ್ಪಾದಿಸಲಾರ.

ಭಾರತದ ಸಂಸ್ಕೃತಿ ಅಥವಾ ಧರ್ಮದ ಪುನರ್ ನಿರ್ಮಾಣವೇನಾದರೂ ಆಗುವುದಿದ್ದಲ್ಲಿ ಅದು ಮುಖ್ಯವಾಗಿ ಈ ದೇಶದ ದಲಿತರು ಮತ್ತು ಕೆಳವರ್ಗದ ಅನುಭವ ಮತ್ತು ನೇತೃತ್ವದಲ್ಲೇ ಆಗಬೇಕು. ಆಗ ಯಾರೂ ಯಾರಿಂದಲೂ ದೂರ ಇರುವುದಿಲ್ಲ; ಎಲ್ಲರೂ ಹತ್ತಿರ ಹತ್ತಿರವೇ ಇರುತ್ತೇವೆ, ಎಂಥ ಸುಖಾನುಭವ!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.