ADVERTISEMENT

ಮಹಿಳಾ ವೋಟ್‌ಬ್ಯಾಂಕ್ ಸಾಧ್ಯವೆ?

ಪದ್ಮಾ ಕೃಷ್ಣಮೂರ್ತಿ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಚುನಾವಣೆಯಲ್ಲಿ ಟಿಕೆಟ್ ಹಂಚುವಾಗಲೇ ತಾರತಮ್ಯ ಎದ್ದುಕಾಣುತ್ತದೆ. ಮಹಿಳೆಯರಿಗೆ ಟಿಕೆಟ್ ಸಿಗುವುದೆ ಇಲ್ಲ. ಅನೇಕ ಬಾರಿ ಜನಪ್ರತಿನಿಧಿ ಮೃತರಾದ ಸಂದರ್ಭದಲ್ಲಿ ಅನುಕಂಪದ ಅಲೆ ಸೃಷ್ಟಿಸಿ ಗೆಲ್ಲಲು ಅವರ ಪತ್ನಿಯನ್ನು ಅನಿವಾರ್ಯವಾಗಿ ಕಣಕ್ಕಿಳಿಸುತ್ತಾರೆ. ಅಲ್ಲಿ ಆಕೆ ಸಮರ್ಥಳು ಎನ್ನುವುದಕ್ಕಿಂತಲೂ ಅನುಕಂಪದ ವೋಟೇ ಮುಖ್ಯವಾಗಿರುತ್ತದೆ.

ಚುನಾವಣೆಗಳಲ್ಲಿ ಮತ ಹಾಕುವಾಗಲೂ ಹೆಚ್ಚಿನ ಮಹಿಳೆಯರಿಗೆ ತಾವೇಕೆ ಮತ ಹಾಕುತ್ತಿದ್ದೇವೆ, ಈ ಪ್ರಜಾಪ್ರಭುತ್ವದಲ್ಲಿ ತನ್ನ ಪಾತ್ರವೇನು ಎಂಬ ಅರಿವು ಇರುವುದಿಲ್ಲ. ಪತಿಯೋ, ಪಿತನೋ, ಪುತ್ರರೋ ಅಥವಾ ಕುಟುಂಬದ ಸದಸ್ಯರೋ ಯಾರಿಗೆ ವೋಟು ಮಾಡಲು ಹೇಳುತ್ತಾರೋ ಅವರಿಗೆ ವೋಟು ಮಾಡಿ ಸುಮ್ಮನಾಗುತ್ತರೆ. ವಿದ್ಯಾವಂತ ಮಹಿಳೆಯರೂ ಇದಕ್ಕೆ ಹೊರತಲ್ಲ. ಹಾಗಾಗಿ ಮಹಿಳೆಯರಲ್ಲಿ ಮೊದಲು ರಾಜಕೀಯ ಪ್ರಜ್ಞೆ ಮೂಡಿಸಬೇಕು.

ಸಾಮಾನ್ಯವಾಗಿ ಎಲ್ಲ ಪಕ್ಷಗಳೂ ವೋಟ್‌ಬ್ಯಾಂಕ್ ಕಡೆಗೆ ಕಣ್ಣು ಹಾಕುತ್ತವೆ. ಜಾತಿ, ಧರ್ಮ ಅಂತ ಎಲ್ಲರೂ ತಮ್ಮತಮ್ಮ ವೋಟ್‌ಬ್ಯಾಂಕ್ ಕೋಟೆಯನ್ನೇ ಕಟ್ಟಿಕೊಂಡಿದ್ದಾರೆ. ಪರಿಶಿಷ್ಟ ಜಾತಿ-ವರ್ಗ, ಅಲ್ಪಸಂಖ್ಯಾತರು ಅಂತ ಎಲ್ಲರೂ ವೋಟ್‌ಬ್ಯಾಂಕ್ ಮಾಡಿಕೊಳ್ಳುವುದು ಸಾಧ್ಯವಾದರೆ ಮಹಿಳೆಯರಿಗೇಕೆ ಸಾಧ್ಯವಾಗುತ್ತಿಲ್ಲ?

ಆಯಾ ಜಾತಿಧರ್ಮಗಳ ವೋಟ್‌ಬ್ಯಾಂಕನ್ನೇ ಗಮನಿಸಿ ಟಿಕೆಟ್‌ಗಳನ್ನೂ ಹಂಚಲಾಗುತ್ತದೆ. ಆದರೆ ಮಹಿಳಾ ವೋಟ್‌ಗಳ ಚಿಂತೆ ಇವರಿಗಿರುವುದಿಲ್ಲ, ಕಾರಣ ಹೇಗಿದ್ದರೂ ಇವರು ಇನ್ಯಾರದೋ ಮಾತು ಕಟ್ಟಿಕೊಂಡು ಮತ ಹಾಕುತ್ತಾರೆಂದು ಗೊತ್ತಿರುತ್ತದೆ. ಇದಕ್ಕೇನೆ ಮಹಿಳೆಯರು ಮೊದಲು ಎಚ್ಚೆತ್ತುಕೊಳ್ಳಬೇಕು. ಮಹಿಳೆಯರು ರಾಜಕೀಯವಾಗಿ ಮೊದಲು ಸಂಘಟಿತರಾಗಬೇಕು. ಮಹಿಳಾ ವೋಟ್‌ಬ್ಯಾಂಕ್  ಮಾಡಿಕೊಳ್ಳಬೇಕು. ಆಗ ಮಹಿಳೆಗೆ  ಪ್ರಾಶಸ್ತ್ಯ ಸಿಗುತ್ತದೆ. ಇಲ್ಲದಿದ್ದರೆ ಪುರುಷರ ಮರ್ಜಿಗೆ ಕಾಯುತ್ತಾ ಕುಳಿತಿರಬೇಕಾಗುತ್ತದೆ.

ಎಲ್ಲ ಪಕ್ಷಗಳಿಗೂ ಮಹಿಳೆಯರು ರಾಜಕೀಯವಾಗಿ ಸಂಘಟಿತರಾಗಿಲ್ಲ ಎಂದು ಚೆನ್ನಾಗಿ ಗೊತ್ತು. ಇನ್ನು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಇದ್ದು ಆಡಳಿತ ನಡೆಸುತ್ತಿದ್ದರೂ ಸಹ ಅನೇಕ ಕಡೆ ಅವರ ಗಂಡಂದಿರೇ ಯಜಮಾನಿಕೆ ಮಾಡುವುದನ್ನು ನೋಡುತ್ತೇವೆ. ಮಹಿಳಾ ಜನ ಪ್ರತಿನಿಧಿಗಳೂ ಸಹ ವೈಯಕ್ತಿಕ ವರ್ಚಸ್ಸನ್ನು ಬೆಳೆಸಿಕೊಂಡು ರಾಜಕೀಯವಾಗಿ ಮಹಿಳಾ ಸಂಘಟನೆ ಮಾಡುವಲ್ಲಿ ಸಫಲರಾಗಿಲ್ಲ. ಯಾವ ಪಕ್ಷದ ನೆರಳೂ ಇಲ್ಲದೆ ಚುನಾವಣೆಯಲ್ಲಿ ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುತ್ತೇನೆಂಬ ಚಾಲೆಂಜ್ ಎಷ್ಟು ಜನ ಮಹಿಳಾ ರಾಜಕಾರಣಿಗಳಿಗಿದೆ? ಮಹಿಳಾ ವೋಟ್‌ಬ್ಯಾಂಕ್ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಬಹುದು. ಹಾಗಾಗಿ ಮಹಿಳಾ ವೋಟ್‌ಬ್ಯಾಂಕ್ ಸಾಧ್ಯವೇ ಎಂದು ಮಹಿಳೆಯರು ಯೋಚಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.