ADVERTISEMENT

ಮಾಗಡಿ ರಸ್ತೆಯ ದುರಂತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಟೋಲ್‌ಗೇಟ್ ನಂತರ ಮಾಗಡಿ ರಸ್ತೆಯ ಹೊಣೆಗಾರಿಕೆ ರಾಜ್ಯ ಸರ್ಕಾರದ್ದೊ ಅಥವಾ ಬಿಬಿಎಂಪಿಯದ್ದೊ ಎಂಬುದು ನಿಗೂಢ ರಹಸ್ಯವಾಗಿದೆ. ಇಲ್ಲೆಲ್ಲಾ ಟ್ರಾಫಿಕ್ ಪೊಲೀಸರ ಸುಳಿವೇ ಕಂಡುಬರುವುದಿಲ್ಲ.

ಸುಂಕದಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಮಾಮೂಲಾಗಿದೆ. ವಾರಕ್ಕೊಂದಾದರೂ ದಾರಿಯಲ್ಲೇ ಕೆಟ್ಟು ನಿಲ್ಲುವ ಬಿಎಂಟಿಸಿ ಬಸ್ಸುಗಳು ಒಂದು ಕಡೆ, ಅಡ್ಡಾದಿಡ್ಡಿ ಚಲಿಸುವ ಖಾಸಗಿ ಬಸ್ಸುಗಳಂತೂ ಜನ ತುಂಬದೆ ಮುಂದೆ ಸಾಗುವುದಿಲ್ಲ.

ರಸ್ತೆ ಬದಿಯಲ್ಲೆ ಪಾರ್ಕಿಂಗ್ ಮಾಡುವವರು, ಓಲಾಡುವ ಕುಡುಕರು ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಹಬ್ಬ ಬಂದರಂತೂ ರಸ್ತೆಯಲ್ಲೆ ತರಕಾರಿ, ಹೂವಿನ ಮಾರಾಟ. ಉಳಿದದ್ದನ್ನು ಅಲ್ಲೆ ಬಿಸಾಡಿ ಕೊಳಕೆಬ್ಬಿಸುತ್ತಾರೆ.

ಇಲ್ಲಿಯ ಪ್ರಮುಖ ಸಮಸ್ಯೆ ಸುಂಕದಕಟ್ಟೆ - ಅನ್ನಪೂರ್ಣೇಶ್ವರಿ ನಗರ - ಜಾಲಹಳ್ಳಿ ಜಂಕ್ಷನ್ ಆಗಿದೆ. ಇಲ್ಲಿ ಸಿಗ್ನಲ್ ವ್ಯವಸ್ಥೆ ಅಗತ್ಯವಾಗಿದೆ. ಇನ್ನು ಕಾಮಾಕ್ಷಿಪಾಳ್ಯದ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆಯೇ. ಇಲ್ಲಿ ಎಲ್ಲೆಂದರಲ್ಲಿ ರಸ್ತೆ ವಿಭಜಕವನ್ನೇ ಕತ್ತರಿಸಿ ವಾಹನಗಳು ಬೇಕಾಬಿಟ್ಟಿ ಚಲಿಸಿ ಜಾಮ್ ಮಾಮೂಲಾಗಿದೆ.
 
ಈ ಎಲ್ಲಾ ಕಾರಣಗಳಿಂದ ಪ್ರಯಾಣಿಕರು ತಡವಾಗಿ ಆಫೀಸು, ಸ್ಕೂಲು, ಕಾಲೇಜುಗಳಿಗೆ ಹೋಗುವುದು, ಉಗಿಸಿಕೊಳ್ಳುವುದು ಅನಿವಾರ್ಯ ಕರ್ಮ. ನಗರಾಭಿವೃದ್ಧಿ ಸಚಿವರು ಹಾಗೂ ಸಂಚಾರಿ ಪೊಲೀಸರು ಇತ್ತ ಗಮನಹರಿಸಿ ಜನರ ಸಮಯ, ಮಾನಸಿಕ ಆರೋಗ್ಯ, ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕೆಂದು ಮನವಿ.

ಸಚಿವ ಸುರೇಶ್ ಕುಮಾರ್ ಅವರು ತಿಂಗಳಿಗೆ ಒಂದು ಸಲವಾದರೂ ಬೆಳಿಗೆ 9 ರಿಂದ 10 ಗಂಟೆಯ ಮಧ್ಯೆ ಪ್ರಯಾಣಿಸಿ, ಜನರ ತಾಳ್ಮೆ ತಪ್ಪುವ ಮುಂಚೆ ಸಮಸ್ಯೆಯನ್ನು ಪರಿಹರಿಸಬೇಕಾಗಿ ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.