ADVERTISEMENT

ಮೋದಿಗೆ ರಾಜ್ಯದ ಜನರ ಬೆಂಬಲ ಹೇಗೆ ?

ಬೊ.ನಾ.ಕೃಷ್ಣಮೂರ್ತಿ, ಸಾಗರ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿಯವರ  `ಸದ್ಭಾವನಾ~ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡರು,  `ನರೇಂದ್ರ  ಮೋದಿಯವರ ಉಪವಾಸಕ್ಕೆ ಕರ್ನಾಟಕದ ಆರೂವರೆ ಕೋಟಿ ಜನರ ಬೆಂಬಲವಿದೆ~ ಎಂದು ಹೇಳಿರುವ ಮಾತನ್ನು ಒಪ್ಪಲು ಸಾಧ್ಯವಿಲ್ಲ.

ಮುಖ್ಯ ಮಂತ್ರಿಯಾಗಿ ತಾವು ಕರ್ನಾಟಕದ ಪ್ರತಿನಿಧಿ ಎಂದು ಅವರು ಭಾವಿಸಿದರೆ ಮತ್ತು  ಕರ್ನಾಟಕದ ಆರೂವರೆ ಕೋಟಿ ಜನರ ಒಳಿತಿಗಾಗಿ ಅವರು ಯಾವುದೇ ಒಳ್ಳೆಯ ಕೆಲಸ ವನ್ನು ಮಾಡಿದರೆ ಅದು ಅವರ ಸದ್ಗುಣವೆಂದೇ ಒಪ್ಪೋಣ.

ಆದರೆ ತಮ್ಮ ಪಕ್ಷದ ಮುಂದಾಳೊಬ್ಬರು ತಮ್ಮ ಹಿತಾಸಕ್ತಿಗಾಗಿ ಕೈಗೊಂಡ ಉಪವಾಸ ಸತ್ಯಾ ಗ್ರಹಕ್ಕೆ ಕರ್ನಾಟಕದ ಸಮಸ್ತ ಪ್ರಜೆಗಳ ಬೆಂಬಲವಿದೆ ಎಂದು ಹೇಳುವ ಜವಾಬ್ದಾರಿಯನ್ನು  ಆರೂವರೆ ಕೋಟಿ ಜನರಲ್ಲಿ ಅರ್ಧದಷ್ಟು ಜನರಾದರೂ ಸದಾನಂದ  ಗೌಡರಿಗೆ ಕೊಟ್ಟಿದ್ದಾರೆಯೇ?

ತಾವು ಮಾಡುವ ಎಲ್ಲಾ ಕೆಲಸಗಳ ವಿಚಾರದಲ್ಲೂ ಸದಾನಂದ ಗೌಡರು ಆರೂವರೆ ಕೋಟಿ ಜನರ ಪ್ರಸ್ತಾಪವನ್ನು ಮಾಡದೇ ಇದ್ದರೆ ಒಳ್ಳೆಯದೇನೋ. ಏಕೆಂದರೆ, ಅವರು ಆರೂವರೆ ಕೋಟಿ ಜನರಿಂದ ಆಯ್ಕೆಯಾದ ಮುಖ್ಯ ಮಂತ್ರಿ ಅಲ್ಲ.

ಅವರನ್ನು ಮುಖ್ಯಮಂತ್ರಿ ಪದವಿಯ ಅಭ್ಯರ್ಥಿ ಎಂದು ಆಯ್ಕೆ  ಮಾಡಿದವರು ಅವರ ಪಕ್ಷದ ಮೇಲ್ಮಾಳಿಗೆಯ ಮಂದಿ, ಮತ್ತು ಅವರನ್ನು ತಮ್ಮ ನಾಯಕರೆಂದು ಬಹುಮತದಿಂದ ಚುನಾಯಿಸಿದವರು ಅವರ ಶಾಸಕಾಂಗ ಪಕ್ಷದ ಸದಸ್ಯರು ಮಾತ್ರ. ಉಳಿದಂತೆ,   ಅವರನ್ನು ಕರ್ನಾಟಕದ ಮುಖ್ಯ ಮಂತ್ರಿ ಎಂದು ರಾಜ್ಯದ ಜನರೆಲ್ಲರೂ ಒಪ್ಪಿಕೊಂಡಿರುವುದು ಸಾಂವಿಧಾನಿಕ ವಿಧಿ ನಿಯಮಗಳಿಗನುಗುಣವಾಗಿ ಅಷ್ಟೆ.                                                                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.