ADVERTISEMENT

ವಯೋಮಿತಿ ಹೆಚ್ಚಳ ಬೇಡ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST

ಯುಜಿಸಿ ವೇತನ ಪಡೆಯುವ ಬೋಧಕರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ವರದಿಯಾಗಿದೆ. ‘ಸದ್ಯ ಇರುವ 60 ವರ್ಷ ನಿವೃತ್ತಿ ವಯಸ್ಸನ್ನು 65ಕ್ಕೆ ಹೆಚ್ಚಿಸುವಂತೆ ಉನ್ನತ ಶಿಕ್ಷಣ ಸಚಿವರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ’ ಎಂಬ ಸುದ್ದಿ ವಾಟ್ಸ್‌ ಆ್ಯಪ್‌ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಒಂದುವೇಳೆ ಈ ಸುದ್ದಿ ನಿಜವಾಗಿದ್ದಲ್ಲಿ, ಅದು ಒಳ್ಳೆಯ ಬೆಳವಣಿಗೆ ಅಲ್ಲ.

ನಿವೃತ್ತಿ ವಯಸ್ಸನ್ನು ಏರಿಸುವುದರಿಂದ, ಉದ್ಯೋಗದ ನಿರೀಕ್ಷೆಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಸುಮಾರು 30 ರಿಂದ 35 ವರ್ಷ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಬೋಧಕರಿಂದ, ಮುಂದೆಯೂ ಅದೇ ದಕ್ಷತೆಯ ಕೆಲಸವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ವರ್ಗ ಕೊಠಡಿಗಳಿಗೆ ಹೋಗಿ ಪಾಠ ಮಾಡುವುದನ್ನು ಬಿಟ್ಟು, ಬೇರೆಬೇರೆ ಚಟುವಟಿಕೆಗಳಲ್ಲಿ ನಿರತರಾದವರು ಮಾತ್ರ ವಯೋಮಿತಿ ಹೆಚ್ಚಳದ ಪರ ಇದ್ದಾರೆ. ಪ್ರತಿದಿನ ಮೂರರಿಂದ ನಾಲ್ಕು ಗಂಟೆ ಪಾಠ ಮಾಡುವವರು ಖಂಡಿತ ವಯೋಮಿತಿ ಹೆಚ್ಚಳದ ಪರವಾಗಿ ಇಲ್ಲ.

ಈಗ ನಿವೃತ್ತಿ ವಯಸ್ಸಿಗೆ ತಲುಪಿರುವ ಬೋಧಕರು ಪಡೆಯುತ್ತಿರುವ ಸಂಬಳದ ಹಣದಲ್ಲೇ, ಮುಂದೆ ಅವರಿಗೆ ಪಿಂಚಣಿ ನೀಡುವುದರ ಜೊತೆಗೆ ಇಬ್ಬರು ಹೊಸ ಉಪನ್ಯಾಸಕರಿಗೆ ವೇತನವನ್ನು ಸಹ ಕೊಡಬಹುದು. ಆದ್ದರಿಂದ ಯುಜಿಸಿ ವೇತನ ಪಡೆಯುವ ಉಪನ್ಯಾಸಕರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದು ಸಮರ್ಥನೀಯವಲ್ಲ.
–ಎಸ್.ಎ. ತಾಂಬೆ, ರಾಣೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.