ADVERTISEMENT

ವಿಪಕ್ಷಕ್ಕೂ ಹೊಣೆ ಇದೆ

ಸಾಮಗ ದತ್ತಾತ್ರಿ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST

‘ಸಂಸದೀಯ ಸಂಪ್ರದಾಯಗಳ ಅವಗಣನೆ ಸಲ್ಲದು’ಎನ್ನುವ ಸಂಪಾದಕೀಯದ (ಏ. 6) ಒಳದನಿಯ ಅಂತರಾರ್ಥ, ಸಂಸತ್ ಕಲಾಪಗಳು ಸ್ಥಗಿತಗೊಳ್ಳಲು ಕೇಂದ್ರದ ಆಡಳಿತ ಪಕ್ಷದ ನಡವಳಿಕೆ ಕಾರಣ ಎನ್ನುವಂತಿದೆ.

ಇದು ಸರಿಯಾದ ವಿಶ್ಲೇಷಣೆ ಅಲ್ಲ. ವಿರೋಧ ಪಕ್ಷಗಳ ಹೊಣೆಗಾರಿಕೆಯು ಆಡಳಿತ ಪಕ್ಷದಕ್ಕಿಂತ ಕಡಿಮೆಯೇನಲ್ಲ. ಬಜೆಟ್ ಅಧಿವೇಶನದ ಪ್ರಾರಂಭದಿಂದಲೂ ವಿರೋಧ ಪಕ್ಷಗಳ ಕೆಲವರು ಕಲಾಪಕ್ಕೆ ಅಡ್ಡಿಮಾಡುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಧೋರಣೆ ಈ ವಿಷಯದಲ್ಲಿ ಏನು ಎನ್ನುವುದು ಸ್ಪಷ್ಟವಾಗಿಲ್ಲ. ಅವಿಶ್ವಾಸ ಗೊತ್ತುವಳಿಯ ಬಗ್ಗೆ ತಾನು ಚರ್ಚೆಗೆ ಸಿದ್ಧವೆಂದು ಆಡಳಿತ ಪಕ್ಷ ಸ್ಪಷ್ಟವಾಗಿ ಹೇಳಿತ್ತು. ಆದರೆ ಕೆಲವು ಸಂಸದರು ತಮ್ಮ ರಾಜ್ಯದ ಹಿತವನ್ನಷ್ಟೇ ಮುಂದುಮಾಡಿ ಗದ್ದಲವೆಬ್ಬಿಸಿ ಸಂಸದೀಯ ನಡವಳಿಕೆಗೆ ವಿರುದ್ಧವಾಗಿ ವರ್ತಿಸಿದ್ದಾರೆ.

ಈ ವಿಷಯದಲ್ಲಿ ಸ್ಪೀಕರ್ ತಮ್ಮ ಅಧಿಕಾರವನ್ನು ಚಲಾಯಿಸಲು ಹಿಂದೇಟು ಹಾಕಿದ್ದು ಯಾಕೆ ಎನ್ನುವುದು ಅರ್ಥವಾಗದು. ಅವರಿಗಿರುವ ಅಧಿಕಾರಗಳಲ್ಲಿ ಗದ್ದಲವೆಬ್ಬಿಸುತ್ತಿರುವ ಸಂಸದರನ್ನು ಹೊರಕ್ಕೆ ಕಳುಹಿಸುವುದು ಸಹ ಒಂದು. ಈ ಅಧಿಕಾರ ಬಳಕೆಗೆ ಸ್ಪೀಕರ್ ಮುಂದಾಗಲಿಲ್ಲ.

ADVERTISEMENT

ಮಿತ್ರಪಕ್ಷಗಳು ಕೈಕೊಟ್ಟರೂ ಆಡಳಿತ ಪಕ್ಷಕ್ಕೆ ತನ್ನದೇ ಆದ ಬಹುಮತ ಇರುವುದರಿಂದ ಅದಕ್ಕೆ ಆತಂಕದ ಕ್ಷಣಗಳು ಎದುರಾಗುವ ಸಂಭವವೇ ಇದ್ದಿರಲಿಲ್ಲ. ಅವಿಶ್ವಾಸ ನಿರ್ಣಯದಂಥ ಗಂಭೀರ ಕ್ರಮಕ್ಕೆ ಮುಂದಾದ ವಿರೋಧ ಪಕ್ಷಗಳು ಆ ಬಗೆಗಿನ ಚರ್ಚೆಗೆ ಸೂಕ್ತ ವಾತಾವರಣವನ್ನು ಸೃಷ್ಟಿಸುವ ಹೊಣೆಯನ್ನೂ ಹೊರಬೇಕಿತ್ತಲ್ಲವೇ? ಕಲಾಪಗಳಲ್ಲಿ ಭಾಗವಹಿಸುವ ತಮ್ಮ ಹಕ್ಕಿಗೆ ಚ್ಯುತಿ ಬರುತ್ತಿದೆಯೆಂದು ಆರೋಪಿಸಿ ಗಲಾಟೆ ಮಾಡುವ ಸಂಸದರನ್ನು ಹೊರಕ್ಕೆ ಹಾಕಬೇಕು ಎನ್ನುವ ನಿರ್ಣಯವನ್ನು ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಇತರ ಯಾವ ಪಕ್ಷದ ಸದಸ್ಯರೂ ಯಾಕೆ ಮಂಡಿಸಲಿಲ್ಲ?

ಒಟ್ಟಾರೆ, ಸಾರ್ವಜನಿಕರ ಹಣ ಪೋಲಾಗುತ್ತಿರುವುದಕ್ಕೆ ನಮ್ಮಿಂದ ಚುನಾಯಿತರಾದ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಕಾರಣರಾಗಿದ್ದಾರೆಂದು ನಿಸ್ಸಂದೇಹವಾಗಿ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.